ನಂಜನಗೂಡು: ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ಆಯೋಜಿಸಲಾದ ಈ ಕಾರ್ಯಕ್ರಮವನ್ನು ಈ ವರ್ಷದ ಥೀಮ್ ನನ್ನ ಭಾರತ, ನನ್ನ ಮತ” ಅಡಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾಲೇಜಿನ ಹಿರಿಯ ಉಪನ್ಯಾಸಕರಾದ ಎಸ್. ಲಿಂಗಣ್ಣ ಸ್ವಾಮಿ ಅವರು ಮಾತನಾಡಿ, ಯುವಜನತೆ ಪ್ರಜಾಪ್ರಭುತ್ವದ ಭವಿಷ್ಯವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಮತದಾನದ ಹಕ್ಕಿನ ಮಹತ್ವವನ್ನು ಅರಿತು, ಜವಾಬ್ದಾರಿಯುತ ಮತದಾರನಾಗಿ ರೂಪುಗೊಳ್ಳಬೇಕು” ಎಂದು ಕರೆ ನೀಡಿದರು.
ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಎಚ್ ಕೆ ಸ್ವಾಮಿ ಗೌಡ ಅವರು ಮಾತನಾಡಿ ಮತದಾನವು ಕೇವಲ ಹಕ್ಕು ಮಾತ್ರವಲ್ಲ, ಸಂವಿಧಾನಾತ್ಮಕ ಕರ್ತವ್ಯವೂ ಹೌದು. ವಿದ್ಯಾರ್ಥಿ ಜೀವನದಲ್ಲೇ ಮತದಾನದ ಮೌಲ್ಯ ಅರಿತುಕೊಂಡರೆ ದೇಶಕ್ಕೆ ಜಾಗೃತ ನಾಗರಿಕರು ಸಿಗುತ್ತಾರೆ ಎಂದು ಹೇಳಿದರು.
ಇದೇ ವೇಳೆ ಹೊಸದಾಗಿ ವಿದ್ಯಾರ್ಥಿಗಳಿಗೆ ಮತದಾರರ ಗುರುತಿನ ಚೀಟಿ ಕುರಿತು ಮಾಹಿತಿ ನೀಡಲಾಯಿತು.
ಮತದಾರರ ನೋಂದಣಿ ಪ್ರಕ್ರಿಯೆ, ಹೆಸರು ತಿದ್ದುಪಡಿ ಹಾಗೂ ವಿಳಾಸ ಬದಲಾವಣೆ ಬಗ್ಗೆ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷಾ ಉಪನ್ಯಾಸಕ ಶ್ರೀ ರಂಗಸ್ವಾಮಿ ರವರು ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತದಾರರ ಶಪಥವನ್ನು ಸ್ವೀಕರಿಸಿದರು. ನಾವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುತ್ತೇವೆ, ಪ್ರತಿಯೊಂದು ಚುನಾವಣೆಯಲ್ಲೂ ಕಡ್ಡಾಯವಾಗಿ ಮತ ಚಲಾಯಿಸುತ್ತೇವೆ ಎಂಬ ಶಪಥವು ವಿಶೇಷವಾಗಿತ್ತು.
ಯುವ ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ರಾಷ್ಟ್ರದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರ ಪಾತ್ರವನ್ನು ಮನದಟ್ಟು ಮಾಡುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ.ಟಿ ಕೆ ರವಿ, ಅದಿಲ್ ಹುಸೇನ್, ಡಾ. ಗೋಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
