ಮೈಸೂರು: ಮೈಸೂರಿನ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ಶ್ರೀ ನರ್ತನ ಎಜುಕೇಷನಲ್ ಅಂಡ್ ಕಲ್ಚರಲ್ ಟ್ರಸ್ಟ್, ಸೌಮ್ಯ ನೃತ್ಯ ಶಾಲೆ ವತಿಯಿಂದ “ನರ್ತನೋತ್ಸವ–2026” ವಾರ್ಷಿಕೋತ್ಸವ ಸಮಾರಂಭವನ್ನು ಭವ್ಯವಾಗಿ ಆಚರಿಸಲಾಯಿತು.
ಪ್ರತಿವರ್ಷವೂ ನಿರಂತರವಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ಈ ಬಾರಿ 150ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ಮನಮೋಹಕ ಭರತನಾಟ್ಯ ಪ್ರದರ್ಶನ ನೀಡಿದರು.
ಈ ವೇಳೆ ಸೌಮ್ಯ ನೃತ್ಯ ಶಾಲೆಯ ಸಂಸ್ಥಾಪಕಿ ವಿದುಷಿ ಸೌಮ್ಯ ರಾಣಿ .ಎಸ್,ಅವರು ಮಾತನಾಡಿ, ಮಕ್ಕಳಲ್ಲಿ ಭಾರತೀಯ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಪ್ರತಿವರ್ಷ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ನೃತ್ಯ ಕಲೆಯ ಮೂಲಕ ಶಿಸ್ತು, ಆತ್ಮವಿಶ್ವಾಸ ಮತ್ತು ಸೃಜನಶೀಲತೆ ಮಕ್ಕಳಲ್ಲಿ ವಿಕಸನಗೊಳ್ಳುತ್ತದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ತೊಳಸಿ ಆಭರಣ ಕುಟುಂಬದ ಮಾಲೀಕರಾದ
ಡಾ. ಟಿ.ಎ.ಅಶೋಕ್ ಕುಮಾರ್ ಅವರ ಪತ್ನಿ ಟಿ.ಎ.ವಸಂತ ಕುಮಾರಿ ಅವರು ಭಾಗವಹಿಸಿ, ಮಕ್ಕಳ ಪ್ರತಿಭೆಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ನಂದಿನಿ ನೃತ್ಯಾಲಯ ಟ್ರಸ್ಟ್ ನಿರ್ದೇಶಕ ವಿದ್ವಾನ್ ಆರ್. ಕಣ್ಣನ್ ಅವರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ದಾಸ ನಮನ ಸಂಸ್ಥೆಯ ಮಕ್ಕಳು ನೀಡಿದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು.
ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
