(ವರದಿ:ಸಿದ್ದಾರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ತಾಲ್ಲೂಕಿನ ಸುಪ್ರಸಿದ್ಧ ಚಿಕ್ಕಲೂರಿನಲ್ಲಿ ಚಂದ್ರ ಮಂಡಲೋತ್ಸವ ಲಕ್ಷಾಂತರ ಜನ ಭಕ್ತ ಸಾಗರದ ನಡುವೆ ಅದ್ದೂರಿಯಾಗಿ ಜರುಗಿತು.
5 ದಿನಗಳ ಕಾಲ ನಡೆಯುವ ಈ ಐತಿಹಾಸಿಕ ಜಾತ್ರೆಗೆ ಶನಿವಾರ ರಾತ್ರಿ 10 ಗಂಟೆಗೆ ವಿದ್ಯುಕ್ತ ಚಾಲನೆ ದೊರೆತು ಪವಾಡ ಪುರುಷನ ಕ್ಷೇತ್ರದಲ್ಲಿ ನಡೆದ ಈ ಅಮೃತ ಘಳಿಗೆಗೆ ಭಕ್ತಸಾಗರವ ಸಾಕ್ಷಿ ಯಾಯಿತು.
ಶ್ರೀ ಕ್ಷೇತ್ರದ ಅದಿದೇವ ಪವಾಡ ಪುರುಷ ಶ್ರೀಸಿದ್ದಪ್ಪಾಜಿ ದೇವಾಲಯದ ಮುಂಭಾಗ ಇರುವ ಚಂದ್ರಮಂಡಲ ಕಟ್ಟೆಯಲ್ಲಿ ಸಿದ್ದ ಪಡಿಸಿದ್ದ ಬಿದಿರಿನಾಕೃತಿಯ ಚಂದ್ರಮಂಡಲಕ್ಕೆ ಬಸವ, ಕಂಡಾಯಗಳು, ಸತ್ತಿಗೆ, ಸುರೆಪಾನಿ ಜಾಗಟೆ, ತಮಟೆ, ನಗಾರಿ ಮಂಗಳ ವಾದ್ಯಗಳ ಹಿಮ್ಮೇಳ ಹಾಗೂ ನೀಲಗಾರರ ಸಾಂಪ್ರದಾಯಿಕ ವಿಧಿ ವಿಧಾನಗಳೊಡನೆ ಜಾತ್ರೆಯ ಕೇಂದ್ರ ಬಿಂದು ಚಂದ್ರ ಮಂಡಲೋತ್ಸವಕ್ಕೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು ರಾಜ ಬೊಪ್ಪೇಗೌಡನಪುರ ಧರೆಗೆ ದೊಡ್ಡವರ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ಜ್ಞಾನಾನಂದ ಚನ್ನರಾಜೇ ಅರಸ್ ಸ್ವಾಮೀಜಿ ಅವರು ಅಗ್ನಿ ಸ್ಪರ್ಶ ಮಾಡುವ ಮೂಲಕ ಜಾತ್ರೆಗೆ ಚಾಲನೆ ನೀಡಿದರು.
ಶ್ರೀ ಸ್ವಾಮಿಗಳು ಚಂದ್ರ ಮಂಡಲೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ನೆರೆದಿದ್ದ ಭಕ್ತರ ಉದ್ಘಾರ, ಜಯಘೋಷ ಮುಗಿಲು ಮುಟ್ಟಿತ್ತು. ಚಂದ್ರ ಮಂಡಲ ದಗ – ದಗಿಸಿ ಉರಿಯುತ್ತಿದ್ದಂತೆ ಉರಿಯುವ ಚಂದ್ರಮಂಡಲಕ್ಕೆ ಭಕ್ತರು ದವಸ, ದಾನ್ಯ, ಧನ ಕನಕಗಳನ್ನು ಎಸೆದು ಧನ್ಯತೆ ಮೆರೆದರು.
ಹರಕೆ ಹೊತ್ತವರು ಚಿನ್ನ, ಬೆಳ್ಳಿ, ನಾಣ್ಯ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ಉರಿಯುತ್ತಿದ್ದ ಬೆಂಕಿಗೆ ಎಸೆದು ಹರಕೆ ತೀರಿಸುವ ಮೂಲಕ ಭಕ್ತಿಯ ಪರಕಾಷ್ಠೆ ಮೆರೆದರು.
ನಂತರ ಚಂದ್ರ ಮಂಡಲ ಉರಿದು ಕೆಳಗೆ ಬೀಳುತ್ತಿದ್ದಂತೆ ಅದರ ಬೂದಿಯನ್ನು ಸಂಗ್ರಹಿಸಿಕೊಳ್ಳಲು ಮುಗಿಬಿದ್ದು ಹರಸಾಹಸ ಪಡುತ್ತಿದ್ದರು.ಈ ವೇಳೆ ಜನರನ್ನು ಚದುರಿಸಲು ಪೊಲೀಸರು ಲಾಠಿ ಬೀಸಬೇಕಾಯಿತು.
ಜಾತ್ರೆಗೆ ರಾಜ್ಯ ಹಾಗೂ ನೆರೆ ಹೊರೆ ರಾಜ್ಯಗಳ ವಿವಿಧ ಭಾಗಗಳಿಂದ ಆಗಮಿಸಿದ್ದ ಲಕ್ಷಾಂತರ ಮಂದಿ ಸಿದ್ದಪ್ಪಾಜಿಯ ಭಕ್ತರು ಉತ್ಸಾಹದಿಂದ ಭಾಗವಹಿಸಿದ್ದರು.
ಚಂದ್ರಮಂಡಲೋತ್ಸವದಲ್ಲಿ ಹನೂರು ಶಾಸಕ ಎಂ.ಆರ್. ಮಂಜುನಾಥ್, ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಪತ್ನಿ ಸಮೇತ ಪಾಲ್ಗೊಂಡಿದ್ದರು.
ಕೊಳ್ಳೇಗಾಲ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ತಹಶೀಲ್ದಾರ್ ಬಸವರಾಜು, ಕೊಳ್ಳೇಗಾಲ ಡಿ.ವೈ.ಎಸ್.ಪಿ ಧಮೇಂದ್ರ, ಸಿಪಿಐ ಶಿವಮಾದಯ್ಯ, ಪಿಎಸ್ಐ ಗಳಾದ ಸುಪ್ರೀತ್, ಚೆಲುವರಾಜು, ಪಾಳ್ಯ ರಾಜಸ್ವ ನಿರೀಕ್ಷಕ ರಂಗಸ್ವಾಮಿ, ಹಾಗೂ ದೇವಸ್ಥಾನದ ಅರ್ಚಕರಾದ ಶಿವಮೂರ್ತಿ, ಕುಮಾರಸ್ವಾಮಿ ಮತ್ತು ಸಿಬ್ಬಂದಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಚಂದ್ರ ಮಂಡಲೋತ್ಸವಕ್ಕೆ ಕೊಳ್ಳೇಗಾಲ ಡಿವೈಎಸ್ಪಿ ಧಮೇಂದ್ರ ಮಾರ್ಗದರ್ಶನದಲ್ಲಿ 150 ಕ್ಕೂ ಹೆಚ್ಚು ಪೊಲೀಸರನ್ನು ನೇಮಿಸಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು.
