ಮೈಸೂರು: ಮೈಸೂರಿನ ವಿಜಯನಗರ ಸಿಡಿಪಿಒ ಕಚೇರಿಗೆ ಕೆಲಸದ ಮೇಲೆ ಬರುವ ಮಹಿಳೆಯರು ಯೋಚಿಸಿಯೇ ಬರಬೇಕು.
ಈ ಕಚೇರಿಯಲ್ಲಿ ಮಹಿಳೆಯರ ಪರದಾಟ ಹೇಳತೀರದು.ಯಾಕಂದರೆ
ಶೌಚಾಲಯಕ್ಕೆ ಬೀಗ ಹಾಕುತ್ತಾರೆ.
ಕಚೇರಿಯಲ್ಲಿ ಕಸದ ರಾಶಿ ತಾಂಡವವಾಡುತ್ತದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಮೂಲಸೌಕರ್ಯ ಗಗನಕುಸುಮ ಆಗಿಬಿಟ್ಟಿದೆ.
ಕುಡಿಯಲು ನೀರೂ ಇಲ್ಲ, ಕುಳಿತುಕೊಳ್ಳಲು ಕುರ್ಚಿ ಕೂಡಾ ಇಲ್ಲ,ಇದೆಲ್ಲ ಇಲ್ಲಗಳ ಕತೆ ವಿಜಯನಗರ ಎರಡನೇ ಹಂತದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಯದು.
ಹೇಳಿಕೇಳಿ ಇದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.ಹಾಗಾಗಿ ಹೆಚ್ಚು ಮಂದಿ ಮಹಿಳೆಯರು ಭೇಟಿ ನೀಡುತ್ತಲೇ ಇರುತ್ತಾರೆ.
ಅಲ್ಲದೆ ಪ್ರತಿದಿನ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಕೆಲಸದ ಸಮಸ್ಯೆ ಪರಿಹಾರಕ್ಕೆ ಬರುತ್ತಿರುತ್ತಾರೆ. ಸಾರ್ವಜನಿಕರು ಅಂಗನವಾಡಿ ಕೇಂದ್ರಗಳ ಕಾರ್ಯವೈಖರಿ ಬಗ್ಗೆ ದೂರು ನೀಡಲು ಬರುತ್ತಾರೆ. ಒಮ್ಮೊಮ್ಮೆ ಸಂಜೆಯವರೆಗೂ ಕಾಯಬೇಕಾದ ಅನಿವಾರ್ಯತೆ ಇರುತ್ತದೆ.ಹೀಗಿರುವಾಗ ಮೂಲಭೂತ ಸೌಕರ್ಯ ಇಲ್ಲದಿದ್ದರೆ ಹೇಗೆ?
ಇದೆಲ್ಲ ಅಧಿಕಾರಿಗಳ ಕಣ್ಣಿಗೆ ಕಾಣಿಸುವುದಿಲ್ಲವೆ?
ಕಚೇರಿ ಕಟ್ಟಡದ ಯಾವ ಭಾಗದಲ್ಲೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ದೂರದಿಂದ ಬರುವ ಮಹಿಳೆಯರು ಗಂಟೆಗಟ್ಟಲೇ ಕಾಯಬೇಕು. ಬಾಯಾರಿಕೆಯಾದರೆ ಅಂಗಡಿಗಳಲ್ಲಿ ಹಣ ಕೊಟ್ಟು ನೀರು ಖರೀದಿಸಬೇಕಿದೆ.
ಸಿಬ್ಬಂದಿ ಮಾತ್ರ ಸುಸಜ್ಜಿತ ಶೌಚಾಲಯ ಬಳಸುತ್ತಾರೆ. ಉಳಿದ ಸಮಯದಲ್ಲಿ ಬೀಗ ಹಾಕಿ ಬಂದ್ ಮಾಡಲಾಗುತ್ತದೆ. ಅಂಗನವಾಡಿ ಸಿಬ್ಬಂದಿಗೆ ಬಳಕೆಗೆ ಅವಕಾಶವಿಲ್ಲ. ಅಶುಚಿತ್ವದಿಂದಾಗಿ ಮಹಿಳೆಯರ ಪಾಡು ಕೇಳುವಂತಿಲ್ಲ.
ಕಟ್ಟಡದ ಸುತ್ತ ಹಾಗೂ ಒಳ ಆವರಣದಲ್ಲೂ ಎಲ್ಲೆಂದರಲ್ಲಿ ತ್ಯಾಜ್ಯ, ಕಸ ಸುರಿಯಲಾಗಿದೆ.ಈ ಕಚೇರಿ ರೋಗದ ತಾಣವಾಗುವ ಕಾಲ ದೂರವಿಲ್ಲ.
ಮಹಿಳೆಯರು, ಮಕ್ಕಳೇ ಹೆಚ್ಚಾಗಿ ಬರುವ ಇಂತಹ ಪ್ರಮುಖ ಸರ್ಕಾರಿ ಕಚೇರಿಗೆ ಮೊದಲು ಮೂಲಸೌಕರ್ಯ ಕಲ್ಪಿಸಲಿ ಎಂದು ಜನ ಆಗ್ರಹಿಸಿದ್ದಾರೆ.
