ಮಾಸ್ಕೋ: ರಷ್ಯಾದಲ್ಲಿ ಸಂಸತ್ ಚುನಾವಣೆ ನಡೆಯುತ್ತಿರುವ ಸಮಯದಲ್ಲೇ ಉಕ್ರೇನ್ ಸೇನೆಯು ರಷ್ಯಾವನ್ನು ಗುರಿಯಾಗಿಸಿ 1,000ಕ್ಕೂ ಹೆಚ್ಚು ಡ್ರೋನ್ಗಳಿಂದ ಭೀಕರ ದಾಳಿ ನಡೆಸಿದೆ.
ಮಾಸ್ಕೋದ ಮೇಯರ್ ಸೆರ್ಗೆಯ್ ಸೊಬಯಾನಿನ್ ಇದು ಇಡೀ ಯುದ್ಧದ ಇತಿಹಾಸದಲ್ಲೇ ಇಮಾಸ್ಕೋ ಮೇಲಿನ ಅತಿದೊಡ್ಡ ಡ್ರೋನ್ ದಾಳಿ ಎಂದು ಹೇಳಿದ್ದಾರೆ.
ಉಕ್ರೇನ್ ಸೇನೆಯು ರಷ್ಯಾದ ವಿವಿಧ ಭಾಗಗಳನ್ನು ಗುರಿಯಾಗಿಸಿ ಒಟ್ಟು 1,600ಕ್ಕೂ ಹೆಚ್ಚು ಡ್ರೋನ್ಗಳನ್ನು ಉಡಾಯಿಸಿದೆ.
ಇದರಲ್ಲಿ ರಷ್ಯಾದ ರಕ್ಷಣಾ ಸಚಿವಾಲಯವು ದೇಶಾದ್ಯಂತ 1,100ಕ್ಕೂ ಹೆಚ್ಚು ಡ್ರೋನ್ಗಳನ್ನು ಹೊಡೆದುರುಳಿಸಿರುವುದಾಗಿ ತಿಳಿಸಿದೆ.
ರಷ್ಯಾದ ರಾಜಧಾನಿ ಮಾಸ್ಕೋ ಒಂದನ್ನೇ ಗುರಿಯಾಗಿಸಿಕೊಂಡು ಸುಮಾರು 450 ಡ್ರೋನ್ಗಳು ನುಗ್ಗಿ ಬಂದಿದ್ದು,ಕೆಲವು ನಾಗರೀಕರು ಮೃತಪಟ್ಟಿದ್ದಾರೆ.
ಮಾಸ್ಕೋದ ಪ್ರಮುಖ ಇಂಧನ ಮೂಲವಾಗಿರುವ ಮತ್ತು ನಗರದ ಶೇ. 40ರಷ್ಟು ಇಂಧನ ಅಗತ್ಯವನ್ನು ಪೂರೈಸುವ ಗಾಜ್ಪ್ರೊಮ್ನೇಫ್ಟ್-ಮಾಸ್ಕೋ ತೈಲ ಸಂಸ್ಕರಣಾಗಾರಕ್ಕೆ ಡ್ರೋನ್ಗಳು ಅಪ್ಪಳಿಸಿದ್ದು, ಅಲ್ಲಿ ಭಾರಿ ಬೆಂಕಿ ಹೊತ್ತಿದೆ.ಜತೆಗೆ ಮಾಸ್ಕೋ ಪ್ರದೇಶದ ರಾಮೆನ್ಸ್ಕೋಯ್ ಹಾಗೂ ಕೋಟೆಲ್ನಿಕಿ ಎಂಬಲ್ಲಿರುವ 21 ಅಂತಸ್ತಿನ ವಸತಿ ಸಮುಚ್ಚಯಕ್ಕೆ ಡ್ರೋನ್ ಡಿಕ್ಕಿ ಹೊಡೆದ ಪರಿಣಾಮ ವಸತಿ ಕಟ್ಟಡಗಳು ಹಾನಿಗೊಳಗಾಗಿದೆ.
ಸುರಕ್ಷತೆಯ ದೃಷ್ಟಿಯಿಂದ ಮಾಸ್ಕೋ ವಲಯದ ಎಲ್ಲಾ 4 ಪ್ರಮುಖ ವಿಮಾನ ನಿಲ್ದಾಣಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, 30ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ.
