ಬೆಂಗಳೂರು: ಬೆಂಗಳೂರಿನ ಕಸ ವಿಲೇವಾರಿ ಸಂಬಂಧ ಸುಮಾರು 39,000 ಕೋಟಿ ಮೊತ್ತದ ಬೃಹತ್ ಯೋಜನೆ ಹಾಗೂ ಟೆಂಡರ್ ಪ್ರಕ್ರಿಯೆಯ ಬಗ್ಗೆ ಪ್ರಶ್ನೆಗಳು ಉದ್ಭವಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಚರ್ಚೆ ನಡೆಸಬೇಕೆಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.
ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ ಮತ್ತು ಪ್ರಶ್ನೆಗಳು ಉದ್ಭವಿಸಿದೆ.ಹಾಗಾಗಿ ಈ ವಿಷಯವನ್ನು ಕೇವಲ ಸಚಿವರು ಹಾಗೂ ಅಧಿಕಾರಿಗಳ ಎಸಿ ಚೇಂಬರ್ಗಳೊಳಗೆ ನಿರ್ಧರಿಸುವ ಬದಲು ಸಾರ್ವಜನಿಕರ ಮುಂದೆ ಮುಕ್ತವಾಗಿ ಚರ್ಚಿಸುವುದು ಅಗತ್ಯವಾಗಿದೆ ಎಂದು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಆಗ್ರಹಿಸಿದ್ದಾರೆ.
ಇದು ಬೆಂಗಳೂರಿನ ಭವಿಷ್ಯ, ನಗರದ ಪರಿಸರ, ಸಾರ್ವಜನಿಕ ಆರೋಗ್ಯ ಹಾಗೂ ತೆರಿಗೆದಾರರ ಹಣಕ್ಕೆ ಸಂಬಂಧಿಸಿದ ಮಹತ್ವದ ವಿಷಯವಾಗಿರುವುದರಿಂದ, ನಗರದ ಟೌನ್ ಹಾಲ್ನಲ್ಲಿ ವಿಶೇಷ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ಆಯೋಜಿಸಿ, ನಾಗರಿಕರು, ತಜ್ಞರು, ಪರಿಸರ ಹೋರಾಟಗಾರರು, ನಿವಾಸಿಗಳ ಸಂಘಗಳು, ಕಸ ವಿಲೇವಾರಿ ಕ್ಷೇತ್ರದ ಪರಿಣಿತರು, ಕಾರ್ಮಿಕ ಪ್ರತಿನಿಧಿಗಳು ಹಾಗೂ ಎಲ್ಲ ರಾಜಕೀಯ ಪಕ್ಷಗಳ ಅಭಿಪ್ರಾಯಗಳನ್ನು ಆಲಿಸಿ ಅಂತಿಮ ನಿರ್ಧಾರ
ಕೈಗೊಳ್ಳಬೇಕು ಎಂದು ಡಾ. ಸತೀಶ್ ಕುಮಾರ್ ಒತ್ತಾಯಿಸಿದ್ದಾರೆ.
ಇಷ್ಟು ಬೃಹತ್ ಮೊತ್ತದ ಯೋಜನೆಗಳಲ್ಲಿ ಸಂಪೂರ್ಣ ಪಾರದರ್ಶಕತೆ, ಸಾರ್ವಜನಿಕ ಪಾಲ್ಗೊಳ್ಳುವಿಕೆ ಹಾಗೂ ಉತ್ತರದಾಯಿತ್ವ ಅತ್ಯಗತ್ಯವಾಗಿದೆ. ಯೋಜನೆಯ ವೆಚ್ಚ, ತಾಂತ್ರಿಕ ವಿವರಗಳು, ಟೆಂಡರ್ ಷರತ್ತುಗಳು, ಪರಿಸರದ ಮೇಲಿನ ಪರಿಣಾಮ, ದೀರ್ಘಕಾಲೀನ ಆರ್ಥಿಕ ಹೊರೆ ಹಾಗೂ ಪರ್ಯಾಯ ಮಾದರಿಗಳ ಬಗ್ಗೆ ಜನರಿಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಆರೋಪ-ಪ್ರತ್ಯಾರೋಪಗಳ ರಾಜಕೀಯದಲ್ಲಿ ತೊಡಗಿಕೊಳ್ಳುವುದಕ್ಕಿಂತ, ಬೆಂಗಳೂರಿನ ಹಿತಾಸಕ್ತಿ ಮತ್ತು ಜನರ ಹಣದ ಸಮರ್ಪಕ ಬಳಕೆಯ ಬಗ್ಗೆ ಗಂಭೀರ ಚರ್ಚೆ ನಡೆಯುವುದು ಮುಖ್ಯ. ಸಾರ್ವಜನಿಕರ ಗಮನವನ್ನು ಮೂಲ ವಿಷಯದಿಂದ ಬೇರೆಡೆಗೆ ಸೆಳೆಯುವ ಪ್ರಯತ್ನಗಳನ್ನು ಬಿಟ್ಟು, ಎಲ್ಲಾ ಪಕ್ಷಗಳು ಮತ್ತು ಸಂಬಂಧಿತ ಸಂಸ್ಥೆಗಳು ವಾಸ್ತವಾಂಶಗಳ ಆಧಾರದ ಮೇಲೆ ಮುಕ್ತ ಸಂವಾದದಲ್ಲಿ ಭಾಗವಹಿಸಬೇಕು ಎಂದು ಡಾ.ಸತೀಶ್ ತಿಳಿಸಿದ್ದಾರೆ.
ಬೆಂಗಳೂರು ನಗರಕ್ಕೆ ಸಂಬಂಧಿಸಿದ ಇಂತಹ ಮಹತ್ವದ ನಿರ್ಧಾರಗಳು ಜನರ ಮುಂದೆ, ಜನರ ಅಭಿಪ್ರಾಯಗಳೊಂದಿಗೆ ಮತ್ತು ಸಂಪೂರ್ಣ ಪಾರದರ್ಶಕತೆಯಿಂದ ಕೈಗೊಂಡಾಗ ಮಾತ್ರ ಉತ್ತಮ ಆಡಳಿತದ ಉದ್ದೇಶ ಸಾರ್ಥಕವಾಗುತ್ತದೆ ಎಂದು ಅವರು ಹೇಳಿದ್ದಾರೆ.
