ಮೈಸೂರು: ಮೈಸೂರು ನಗರದ ನಜರ್ ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಸ್ಪಾ ಸೆಂಟರ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ನಜರ್ ಬಾದ್ ಠಾಣಾ ವ್ಯಾಪ್ತಿಯ ಸಿದ್ಧಾರ್ಥನಗರ, ವಿನಯಮಾರ್ಗದಲ್ಲಿರುವ ಸಿಲ್ವರ್ ಕ್ಲೌಡ್ ಸ್ಪಾ ಮತ್ತು ಮಸಾಜ್ ಸೆಂಟರ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ, ಉಪ ಪೊಲೀಸ್ ಆಯುಕ್ತರ (ಕಾನೂನು ಮತ್ತು ಸುವ್ಯವಸ್ಥೆ) ಸೂಚನೆಯಂತೆ, ಸೆನ್ ಕ್ರೈಂ ಪೊಲೀಸ್ ಠಾಣೆ ಹಾಗೂ ನಜರ್ ಬಾದ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ದಾಳಿ ಮಾಡಿದ್ದಾರೆ.
ಈ ವೇಳೆ ಅಲ್ಲಿ ವೇಶ್ಯಾವಾಟಿಕೆಗೆ ಒಳಗಾಗಿದ್ದ ಮೂವರು ಮಹಿಳೆಯರನ್ನು ರಕ್ಷಣೆ ಮಾಡಿ, ಪುನರ್ ವಸತಿ ಕಲ್ಪಿಸಲಾಗಿದೆ.
ಸ್ಪಾ ಹೆಸರಿನಲ್ಲಿ ಅಕ್ರಮ ದಂಧೆ ನಡೆಸಿ ಹಣ ಗಳಿಸುತ್ತಿದ್ದ ಮಸಾಜ್ ಸೆಂಟರ್ ನ ಮಹಿಳಾ ಮ್ಯಾನೇಜರ್ ನನ್ನು ಬಂಧಿಸಲಾಗಿದೆ. ಈ ಸಂಬಂಧ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣದಲ್ಲಿ ಸ್ಪಾ ಸೆಂಟರ್ ನ ಮಾಲೀಕ ಆರೋಪಿ ಸಂದೀಪ್ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
