ಮೈಸೂರು: ಜನಸಾಮಾನ್ಯರ ಆರೋಗ್ಯದ ಹಿತದೃಷ್ಟಿಯಿಂದ ಹೆಚ್ಚುವರಿಯಾಗಿ ನಗರ ಪ್ರದೇಶದ ಹೊರವಲಯಕ್ಕೆ ಆರೋಗ್ಯ ಕೇಂದ್ರವನ್ನು ಮಂಜೂರು ಮಾಡಲಾಗಿದೆ
ಎಂದು ಶಾಸಕರಾದ ಜಿ.ಟಿ ದೇವೇಗೌಡ ತಿಳಿಸಿದರು.
ಏಕಲವ್ಯ ನಗರದ ಆರೋಗ್ಯ ಕೇಂದ್ರಕ್ಕೆ ಜನಸಾಮಾನ್ಯರು ಭೇಟಿ ನೀಡಿ ಆರೋಗ್ಯ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.
ಮೈಸೂರು ಗ್ರಾಮಾಂತರ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಏಕಲವ್ಯ ನಗರದಲ್ಲಿ ನೂತನವಾಗಿ ಪ್ರಾರಂಭವಾದ “ನಮ್ಮ ಕ್ಲಿನಿಕ್” ಅನ್ನು ಶುಕ್ರವಾರ ಉದ್ಘಾಟನೆ ಮಾಡಿ ಜಿಟಿಡಿ ಮಾತನಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಕುಮಾರಸ್ವಾಮಿ ಪಿ.ಸಿ ಅವರು ಮಾತನಾಡಿ ಜಿಲ್ಲೆಯಲ್ಲಿ ಈಗಾಗಲೇ 14 ಕೇಂದ್ರಗಳು ಪ್ರಾರಂಭವಾಗಿದ್ದು, ಆರೋಗ್ಯದ ಹಿತದೃಷ್ಟಿಯಿಂದ ಸಾರ್ವಜನಿಕರ ಅನುಕೂಲಕ್ಕೆ ಅನುಗುಣವಾಗಿ ‘ನಮ್ಮ ಕ್ಲಿನಿಕ್’ಗಳನ್ನು ಪ್ರಾರಂಬಿಸಲಾಗುತ್ತಿದೆ ಎಂದು ಹೇಳಿದರು.
ನಮ್ಮ ಕ್ಲಿನಿಕ್ ನಲ್ಲಿ ಮಾರ್ಗಸೂಚಿ ಅನುಸಾರ ಸುಮಾರ 12 ವಿವಿಧ ಆರೋಗ್ಯ ಸೇವೆಗಳನ್ನು ನೀಡಲಾಗುವುದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರದ ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.
