ಮೈಸೂರು, ಅಕ್ಟೋಬರ್.1:
ಕೇಂದ್ರ ಪುರಸ್ಕೃತ ಸ್ವಚ್ಛತೆಯೇ ಸೇವೆ- ಅಭಿಯಾನದ ಅಂಗವಾಗಿ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಇಂದು ನಗರದ ವಿವಿಧೆಡೆ ಸ್ವಚ್ಛತಾ ಹಾಗೂ ಕಸ ಸಂವೇದನಾಶೀಲ ಪ್ರದೇಶಗಳ ಪರಿವರ್ತನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಸಾವಿತಾ ಎಂ.ಕೆ. ಅವರು ಗುರುವಾರ ಬೆಳಿಗ್ಗೆ 7 ಗಂಟೆಗೆ ಹಿನಕಲ್ ಫ್ಲೈಓವರ್ನಿಂದ ಪರಿಶೀಲನಾ ಭೇಟಿಯನ್ನು ಪ್ರಾರಂಭಿಸಿದರು. ಹೊರ ವರ್ತುಲ ರಸ್ತೆಯ ವಿವಿಧ ಭಾಗಗಳಲ್ಲಿನ ಸ್ವಚ್ಛತೆ, ರಸ್ತೆ ಬದಿ ತ್ಯಾಜ್ಯ, ಕಳೆ-ಪೊದೆಗಳ ತೆರವು ಹಾಗೂ ಇತರೆ ನಾಗರಿಕ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿದರು.
ನಂತರ ಕೆಸರೆ ಎಸ್ ಟಿ ಪಿ ಸಮೀಪ “ಸ್ವಚ್ಛತೆಯೇ ಸೇವೆ” ಸ್ವಚ್ಛತಾ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿ, ಪೌರಕಾರ್ಮಿಕರು ಹಾಗೂ ಸಂಬಂಧಪಟ್ಟ ತಂಡಗಳು ಭಾಗವಹಿಸಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡರು.
ಬಳಿಕ ವಿದ್ಯಾಶಂಕರ ನಗರದಲ್ಲಿನ ಜಿವಿಪಿ ಪ್ರದೇಶಕ್ಕೆ ಭೇಟಿ ನೀಡಿ,ಅಲ್ಲಿ ಕೈಗೊಂಡಿರುವ ತ್ಯಾಜ್ಯ ಮುಕ್ತ ಹಾಗೂ ಶಾಶ್ವತ ಪರಿವರ್ತನಾ ಕ್ರಮಗಳನ್ನು ಪರಿಶೀಲಿಸಿದರು.
Landstorm Building ಸಮೀಪದ ಬಯಲು ಮೂತ್ರ ವಿಸರ್ಜನೆಗೆ ಒಳಗಾಗುತ್ತಿದ್ದ ಸ್ಥಳದ ಪರಿವರ್ತನಾ ಪ್ರದೇಶಕ್ಕೆ ಭೇಟಿ ನೀಡಿ,ಸ್ಥಳವನ್ನು ಸ್ವಚ್ಛಗೊಳಿಸಿ, ಅಶುಚಿತ್ವ ಮರುಕಳಿಸದಂತೆ ಕೈಗೊಂಡಿರುವ ಸುಂದರೀಕರಣ ಹಾಗೂ ಶಾಶ್ವತ ನಿರ್ವಹಣಾ ಕ್ರಮಗಳನ್ನು ಪರಿಶೀಲಿಸಲಾಯಿತು.
ನಗರದಲ್ಲಿ ಸ್ವಚ್ಛತೆ ಕಾಪಾಡುವುದು ಕೇವಲ ಒಂದು ದಿನದ ಕಾರ್ಯಕ್ರಮವಾಗಿರದೆ, ಸಾರ್ವಜನಿಕರು ಮತ್ತು ಆಡಳಿತದ ಸಹಭಾಗಿತ್ವದ ನಿರಂತರ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಕಸ ಸುರಿಯುವ ಹಾಗೂ ಬಯಲು ಮೂತ್ರ ವಿಸರ್ಜನೆ ನಡೆಯುವ ಸಂವೇದನಾಶೀಲ ಸ್ಥಳಗಳನ್ನು ಗುರುತಿಸಿ, ಅವುಗಳನ್ನು ಶಾಶ್ವತವಾಗಿ ಪರಿವರ್ತಿಸಲು ಮಹಾನಗರ ಪಾಲಿಕೆ ಕ್ರಮ ಕೈಗೊಳ್ಳುತ್ತಿದೆ.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ವಿವಿಧ ವಿಭಾಗಗಳ ಅಧಿಕಾರಿಗಳು, ವಲಯ ಅಧಿಕಾರಿಗಳು, ಪರಿಸರ ಅಭಿಯಂತರರು, ಆರೋಗ್ಯ ನಿರೀಕ್ಷಕರು, ಪೌರಕಾರ್ಮಿಕರು ಮತ್ತಿತರ ಸಿಬ್ಬಂದಿ ಭಾಗವಹಿಸಿದ್ದರು.
