ಮಂಗಳೂರು: ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್(ಎಂ ಆರ್ ಪಿ ಎಲ್ ) ಆವರಣದಲ್ಲಿ ಬುಧವಾರ ಮಧ್ಯಾಹ್ನ ಭೀಕರ ಸ್ಫೋಟ ಸಂಭವಿಸಿದ್ದು,
ಒಬ್ಬ ಕಾರ್ಮಿಕ ಮೃತಪಟ್ಟಿದ್ದಾನೆ.
ಈ ಅವಘಡದಲ್ಲಿ 9 ಮಂದಿಗೆ ಗಾಯಗಳಾಗಿದ್ದು,ಒಬ್ಬನ ಸ್ಥಿತಿ ಗಂಭೀರವಾಗಿದೆ.
ಎಂಆರ್ಪಿಎಲ್ ನಲ್ಲಿ ಸ್ಫೋಟ ಸಂಭವಿಸಿರುವುದನ್ನು ಕಂಪನಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ರುಡಾಲ್ಫ್ ನೊರೊನ್ಹಾ ಅವರು ಖಚಿತಪಡಿಸಿದ್ದಾರೆ.
ಎಂಆರ್ಪಿಎಲ್ ಸಿಹೆಚ್ಟಿ ಘಟಕದಲ್ಲಿ ಸ್ಫೋಟದ ಬಳಿಕ ಬೆಂಕಿ ಕಾಣಿಸಿಕೊಂಡಿತ್ತು, ಸದ್ಯ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿದೆ. ಘಟಕದಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೂಲ್ಕಿ ಮೂಲದ ಮನೀಶ್ ಕರ್ಕೇರ ಅವರ ಮೃತದೇಹವು ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ತಿಳಿಸಿದ್ದಾರೆ.
ಅಲ್ಲದೆ, ಘಟನೆಯಲ್ಲಿ ಶೇ.35ರಷ್ಟು ಸುಟ್ಟ ಗಾಯಗಳಿಗೆ ಒಳಗಾಗಿರುವ ರಾಜೇಶ್ ಬ್ಯಾಪ್ಟಿಸ್ಟ್ ಅವರು ಶ್ರೀನಿವಾಸ ಆಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸ್ಫೋಟದ ತೀವ್ರತೆಗೆ ಸಮೀಪದ ಜೋಕಟ್ಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮನೆ, ಕಟ್ಟಡಗಳು ನಡುಗಿದ ಅನುಭವ ಆಗಿದೆ. ಮತ್ತೊಂದೆಡೆ ಬಜ್ಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಕಂಪನದ ಅನುಭವವಾಗಿದೆ.
ತಕ್ಷಣವೇ ಕಾರ್ಯಪ್ರವೃತ್ತರಾದ ಆಂತರಿಕ ಅಗ್ನಿಶಾಮಕ ದಳವು ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತಂದಿದೆ.
ಸ್ಫೋಟದ ತೀವ್ರತೆಗೆ ಎಂಆರ್ಪಿಎಲ್ ಕೂಗಳತೆಯ ದೂರದಲ್ಲಿರುವ ಜೋಕಟ್ಟೆ ಗ್ರಾಮ ಪಂಚಾಯತ್ ಕಚೇರಿ, ಗ್ರಂಥಾಲಯ, ಅಂಗನವಾಡಿ ಹಾಗೂ ಸುತ್ತಮುತ್ತಲಿನ ನೂರಾರು ಮನೆಗಳಲ್ಲಿ ನಡುಗಿದ ಅನುಭವವಾಗುದೆ. ಹಲವು ಮನೆಗಳ ಗೋಡೆಗಳು ಬಿರುಕು ಬಿಟ್ಟಿದೆ ಇದರಿಂದ ಜನರು ಆತಂಕಕ್ಕೊಳಗಾಗಿದ್ದಾರೆ.
