ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡಿ ಅವರ ಚಾರಿತ್ರ್ಯಹರಣಕ್ಕೆ ಸಂಚು ಮಾಡಿದವರನ್ನು ಎರಡು ದಿನದೊಳಗೆ ಬಂಧಿಸಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಬೆಂಗಳೂರಿನ ಪೊಲೀಸ್ ಆಯುಕ್ತರ ಕಚೇರಿಗೆ ಧಾವಿಸಿ ಮೆಟ್ಟಿಲ ಮೇಲೆ ಧರಣಿ ಕುಳಿತ ಕುಮಾರಸ್ವಾಮಿ ಮಾಧ್ಯಮಗಳೊಂದಿಗೆ ಮಾತನಾಡಿ,
ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಅನುಮಾನ ಬಂದರೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ವಿಚಾರಣೆಗೆ ಕರೆಯುತ್ತೇವೆ ಎಂಬ ಗೃಹ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆ ಕುರಿತು ಕಿಡಿಕಾರಿದರು.
ಗೃಹ ಸಚಿವ ಪ್ರಿಯಾಂಕ ಖರ್ಗೆ ಅತ್ಯಂತ ಬೇಜವಾಬ್ದಾರಿಯಿಂದ ಹಾಗೂ ಲಘುವಾಗಿ ನನ್ನ ಮತ್ತು ನನ್ನ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ. ನನ್ನ ಕಾರ್ಯಕರ್ತರು ಮಾತ್ರವಲ್ಲದೆ ವೈಯಕ್ತಿಕವಾಗಿ ನನಗೆ ಕೂಡ ತುಂಬಾ ನೋವಾಗಿದೆ. ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಮಾಡಿದ ಕಿರಾತಕರನ್ನು ಬಂಧಿಸಲಾಗದ ಪೊಲೀಸ್ ಇಲಾಖೆ, ಜೆಡಿಎಸ್ ಕಾರ್ಯಕರ್ತರ ಮೇಲೆ ಬಿದ್ದಿದೆ ಎಂದು ಅವರು ಕಿಡಿಕಾರಿದರು.
ಸ್ಟಿಂಗ್ ಮಾಡಿದ ವ್ಯಕ್ತಿಗಳನ್ನು ತಕ್ಷಣ ಬಂಧಿಸಬೇಕು. ಸರ್ಕಾರಕ್ಕೆ ಮತ್ತು ಪೊಲೀಸ್ ವ್ಯವಸ್ಥೆಗೆ ಎರಡು ದಿನಗಳ ಗಡುವು ನೀಡುತ್ತೇನೆ.ಅಷ್ಟರಲ್ಲಿ ತಪ್ಪಿತಸ್ಥರನ್ನು ಬಂಧಿಸದಿದ್ದರೆ ಮುಂದೆ ಆಗುವ ಪರಿಣಾಮಗಳಿಗೆ ನಾನು ಜವಾಬ್ದಾರಿ ಅಲ್ಲ ಸರ್ಕಾರವೇ ನೇರ ಹೊಣೆ ಎಂದು ಕಟುವಾಗಿ ಎಚ್ಚರಿಸಿದರು.
ಸ್ಟಿಂಗ್ ಆಪರೇಷನ್ ಮಾಡಿದವರಿಗೂ ಹಾಗೂ ಹಾಲಿ ಮುಖ್ಯಮಂತ್ರಿಗೂ ಇರುವ ಸಂಬಂಧ ಏನು ಎನ್ನುವುದು ಎಲ್ಲರಿಗೂ ಗೊತ್ತಿದೆ. ಸಿದ್ದರಾಮಯ್ಯ ಅವರ ರಾಜಕೀಯವನ್ನು ಹೇಗೆ ಹಾಳು ಮಾಡಲಾಯಿತು ಎಂಬುದು ರಾಜ್ಯದ ಜನತೆಗೆ ಗೊತ್ತಿದೆ. ಈ ಹಿನ್ನೆಲೆಯಲ್ಲಿ ಅಪರಾಧಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಸಚಿವರು ಆಗ್ರಹಿಸಿದರು.
ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ನಲ್ಲಿ ನೇರವಾಗಿ ಭಾಗಿಯಾಗಿರುವ ವ್ಯಕ್ತಿ ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜಿ ವಾಲಾ ಅವರೊಂದಿಗೆ ಭಾವಚಿತ್ರ ತೆಗೆದುಕೊಂಡಿದ್ದಾನೆ ಎಂದು ಹೇಳಿದ ಕುಮಾರಸ್ವಸಮಿ, ಭಾವ ಚಿತ್ರಗಳನ್ನು ಇದೇ ವೇಳೆ ಬಿಡುಗಡೆ ಮಾಡಿದರು.
ಇವರ ಆಟ ಬಹಳ ದಿನ ನಡೆಯುವುದಿಲ್ಲ. ಒಂದೂವರೆ ವರ್ಷ ಈ ಸರ್ಕಾರ ಇರುತ್ತೆ. ಆಮೇಲೆ ಇವರ ಆಟ ನಡೆಯುತ್ತದೆಯೇ ಎಂಬುದನ್ನು ನೋಡುತ್ತೇನೆ. ಪೊಲೀಸರು ಈ ಅಪರಾಧಿಗಳನ್ನು ಬಂಧಿಸಬೇಕು. ಇಲ್ಲವಾದರೆ ನಮ್ಮ ಶಕ್ತಿಯನ್ನು ತೋರಿಸುತ್ತೇನೆ ಎಂದು ಹೆಚ್ ಡಿ ಕೆ ಎಚ್ಚರಿಕೆ ನೀಡಿದರು.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಪೊಲೀಸ್ ಆಯುಕ್ತರ ಕಚೇರಿಯ ಮೆಟ್ಟಿಲ ಮೇಲೆ ಜೆಡಿಎಸ್ ಪಕ್ಷದ ನಾಯಕರ ಜತೆ ಧರಣಿ ಕುಳಿತಿದ್ದ ಕೇಂದ್ರ ಸಚಿವರನ್ನು ಧರಣಿ ಕೈಬಿಡುವಂತೆ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಮನವಿ ಮಾಡಿದರು.
ತಮ್ಮ ಆರೋಪದ ಬಗ್ಗೆ ಪಾರದರ್ಶಕವಾಗಿ ತನಿಖೆ ನಡೆಸುತ್ತೇವೆ ಹಾಗೂ ಅನವಶ್ಯಕವಾಗಿ ನಿಮ್ಮ ಪಕ್ಷದ ಕಾರ್ಯಕರ್ತರಿಗೆ, ಸಾಮಾಜಿಕ ಜಾಲತಾಣದ ಯುವಕರಿಗೆ ಕಿರುಕುಳ ನೀಡುವುದಿಲ್ಲ ಎಂದು ಪೊಲೀಸ್ ಆಯುಕ್ತರು ಭರವಸೆ ನೀಡಿದರು. ತದನಂತರ ಕೇಂದ್ರ ಸಚಿವರು ಧರಣಿಯನ್ನು ಕೈಬಿಟ್ಟರು.
ಜೆಡಿಎಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಶಾಸಕರಾದ ಟಿ.ಎನ್.ಜವರಾಯಿ ಗೌಡರು, ಶಾಸಕಿ ಕರೆಮ್ಮ ನಾಯಕ, ಮಾಜಿ ಶಾಸಕರಾದ ಸುರೇಶ್ ಗೌಡ, ವೀರಭದ್ರಪ್ಪ ಹಾಲರವಿ, ರಾಜಾ ವೆಂಕಟಪ್ಪ ನಾಯಕ, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಸೇರಿದಂತೆ ಅನೇಕ ನಾಯಕರು, ಕಾರ್ಯಕರ್ತರು ಧರಣಿಯಲ್ಲಿ ಪಾಲ್ಗೊಂಡಿದ್ದರು.
