ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರದ ದಮನಕಾರಿ ನೀತಿಗಳು, ಮತದಾರರ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಿಂದ ಅರ್ಹ ಮತದಾರರ ಹಕ್ಕುಗಳಿಗೆ ಧಕ್ಕೆ ಹಾಗೂ ದೆಹಲಿಯಲ್ಲಿ ಪ್ರತಿಭಟಿಸುತ್ತಿರುವ ಯುವಜನರ ಮೇಲಿನ ದಬ್ಬಾಳಿಕೆ ಖಂಡಿಸಿ ಆಮ್ ಆದ್ಮಿ ಪಕ್ಷ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿತು.
ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಪ್ರತಿಭಟನೆಯ ನೇತೃತ್ವವನ್ನು ವಹಿಸಿ ಮಾತನಾಡಿ ಮತದಾರರ ಪಟ್ಟಿಯ ಪರಿಷ್ಕರಣೆ ಹೆಸರಿನಲ್ಲಿ ಅರ್ಹ ನಾಗರಿಕರು ಮತದಾನದ ಹಕ್ಕಿನಿಂದ ವಂಚಿತರಾಗುವ ಆತಂಕಕ್ಕೆ ಅವಕಾಶ ನೀಡಬಾರದು ಎಂದು ಹೇಳಿದರು.
ಎಸ್ಐಆರ್ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಿ, ಅದರ ಪರಿಣಾಮಗಳ ಕುರಿತು ಪಾರದರ್ಶಕ ಮತ್ತು ನ್ಯಾಯಸಮ್ಮತ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.
ಮತದಾನದ ಹಕ್ಕು ಜನರ ಪ್ರಜಾಪ್ರಭುತ್ವದ ಅಡಿಪಾಯವಾಗಿದ್ದು, ಅದನ್ನು ರಕ್ಷಿಸುವುದು ಚುನಾವಣಾ ಆಯೋಗದ ಜವಾಬ್ದಾರಿ ಎಂದು ಹೇಳಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಮಾತನಾಡಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಎಸ್ಐಆರ್ ಪ್ರಕ್ರಿಯೆ ಕುರಿತು ದೇಶದ ಜನರ ಆತಂಕಗಳಿಗೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ಚುನಾವಣಾ ಆಯೋಗವು ಬಿಜೆಪಿ ರಾಜಕೀಯ ಹಿತಾಸಕ್ತಿಗಳಿಗೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸುತ್ತಿದೆ ಎಂಬ ಅನುಮಾನಗಳಿಗೆ ತನ್ನ ನಿಷ್ಪಕ್ಷಪಾತ ಕಾರ್ಯವೈಖರಿಯ ಮೂಲಕ ಉತ್ತರಿಸಬೇಕು. ಚುನಾವಣಾ ಆಯೋಗ ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂಬ ಆರೋಪಗಳಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
ಸಂವಿಧಾನಕ್ಕೆ ನಿಷ್ಠವಾಗಿರಬೇಕಾದ ಆಯೋಗವು ಯಾವುದೇ ರಾಜಕೀಯ ಪಕ್ಷದ ಒತ್ತಡಕ್ಕೆ ಮಣಿಯಬಾರದು ಎಂದು ಕಟುವಾಗಿ ಟೀಕಿಸಿದರು.
ಸರ್ಕಾರವನ್ನು ಪ್ರಶ್ನಿಸುವುದು ಅಪರಾಧವಲ್ಲ; ಅದು ಪ್ರಜಾಪ್ರಭುತ್ವದ ಹಕ್ಕು ಎಂದು ಹೇಳಿದರು. ಯುವಜನರ ಸಮಸ್ಯೆಗಳಿಗೆ ಉತ್ತರ ನೀಡುವ ಬದಲು ಅವರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಖಂಡನೀಯ. ಅಧಿಕಾರ ಶಾಶ್ವತವಲ್ಲ; ಸಂವಿಧಾನ ಮತ್ತು ಜನರ ಹಕ್ಕುಗಳೇ ಶಾಶ್ವತ ಎಂದು ಎಚ್ಚರಿಸಿದರು.
ಎಸ್ಐಆರ್ ಪ್ರಕ್ರಿಯೆ ಸ್ಥಗಿತಗೊಳಿಸುವುದು, ಅರ್ಹ ಮತದಾರರ ಹಕ್ಕುಗಳಿಗೆ ರಕ್ಷಣೆ ನೀಡುವುದು ಹಾಗೂ ಚುನಾವಣಾ ಆಯೋಗದ ನಿಷ್ಪಕ್ಷಪಾತತೆಯನ್ನು ಖಚಿತಪಡಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬೆಂಗಳೂರು ನಾಗರಾಜ್, ಶಶಿಧರ್ ಆರಾಧ್ಯ , ಹಿರಿಯ ಮುಖಂಡರಾದ ವಿಜಯ ಶರ್ಮ, ಉಷಾ ಮೋಹನ್, ಜಗದೀಶ್ ವಿ. ಸದಂ, ಲೋಹಿತ್ ಕುಮಾರ್, ಅಶೋಕ್ ಮೃತ್ಯುಂಜಯ, ಜಗದೀಶ್ ಚಂದ್ರ, ಮರಿಯಾ ಹುಸೇನ್, ಸುರೇಶ್, ನಿತ್ಯಾನಂದ ಸಾಹು, ಬೈರೆಡ್ಡಿ, ವೆಂಕಟಾಚಲಪತಿ ಸೇರಿದಂತೆ ಅನೇಕ ನಾಯಕರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.
