ಬೆಂಗಳೂರು: ರಾಜ್ಯದಲ್ಲಿ ಒಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆ, ಮತ್ತೊಂದೆಡೆ ಹಾಲು ಮತ್ತು ಸಾರಿಗೆ ದರಗಳ ಹೆಚ್ಚಳ ಮಾಡಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಮ್ ಆದ್ಮಿ ಪಕ್ಷ ಇಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯಧ್ಯಕ್ಷ ಸೀತಾರಾಮ್ ಗುಂಡಪ್ಪ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನಸಾಮಾನ್ಯರ ಬದುಕು ನೆಮ್ಮದಿಯಿಂದ ಸಾಗದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಂದಿನಿ ಹಾಲಿನ ದರವನ್ನು ಲೀಟರ್ಗೆ 8 ರೂ ಹೆಚ್ಚಿಸುವ ಮೂಲಕ ಕರ್ನಾಟಕದ ಇತಿಹಾಸದಲ್ಲಿಯೇ ಅತಿದೊಡ್ಡ ಏಕಕಾಲದ ದರ ಏರಿಕೆಗೆ ಸರ್ಕಾರ ಮುಂದಾಗಿದೆ. ರೈತರ ಹಿತಾಸಕ್ತಿಯನ್ನು ಕಾಪಾಡುತ್ತಿದ್ದೇವೆ ಎಂಬ ನೆಪವನ್ನು ಮುಂದಿಟ್ಟುಕೊಂಡು ರೈತರನ್ನೇ ಜನರ ವಿರುದ್ಧ ಗುರಾಣಿಯನ್ನಾಗಿ ಬಳಸುತ್ತಿರುವುದು ಸರ್ಕಾರದ ಜವಾಬ್ದಾರಿಯುತ ಆಡಳಿತವೇ ಎಂದು ಪ್ರಶ್ನಿಸಿದರು.
ರೈತರಿಗೆ ನ್ಯಾಯಯುತ ಬೆಲೆ ನೀಡುವುದು ಸರ್ಕಾರದ ಕರ್ತವ್ಯವೇ ಹೊರತು, ಅದರ ಸಂಪೂರ್ಣ ಹೊರೆಯನ್ನು ಸಾಮಾನ್ಯ ಗ್ರಾಹಕರ ಮೇಲೆ ಹೇರುವುದು ಯಾವ ನ್ಯಾಯ? ರೈತರಿಗೆ ನೇರವಾಗಿ ಸೂಕ್ತ ಆರ್ಥಿಕ ನೆರವು ನೀಡುವ ಬದಲು ಹಾಲಿನ ದರ ಹೆಚ್ಚಿಸಿ ಬಡ ಕುಟುಂಬಗಳ ಮಕ್ಕಳಿಗೆ ಸಿಗಬೇಕಾದ ಪೌಷ್ಟಿಕ ಆಹಾರವನ್ನೇ ದುಬಾರಿಗೊಳಿಸಿರುವುದು ಖಂಡನೀಯ. ರೈತರಿಗೂ ನ್ಯಾಯ ಸಿಗಬೇಕು, ಗ್ರಾಹಕರಿಗೂ ಕೈಗೆಟುಕುವ ದರದಲ್ಲಿ ಹಾಲು ದೊರೆಯಬೇಕು. ಇದಕ್ಕಾಗಿ ಸರ್ಕಾರ ತನ್ನ ಆರ್ಥಿಕ ನೀತಿಯಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು ಎಂದು ಆಗ್ರಹಿಸಿದರು.
ಬೆಂಗಳೂರಿನ ಜೀವನಾಡಿಯಾಗಿರುವ ಬಿಎಂಟಿಸಿ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಹೆಚ್ಚಿಸಲು ಸರ್ಕಾರ ಸಿದ್ಧತೆ ನಡೆಸಿರುವುದು ಮತ್ತೊಂದು ಜನವಿರೋಧಿ ನಿರ್ಧಾರವಾಗಿದೆ ಎಂದು ಖಂಡಿಸಿದರು.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಜಾರಿಗೊಳಿಸಿದ್ದೇವೆ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಪ್ರಯಾಣ ದರ ಹೆಚ್ಚಿಸುವುದು ಸರಿಯಲ್ಲ. ಶಕ್ತಿ ಯೋಜನೆಗೆ ಸರ್ಕಾರ ನೀಡಬೇಕಾದ ಅನುದಾನ ಮತ್ತು ಮರುಪಾವತಿಯನ್ನು ಸಮರ್ಪಕವಾಗಿ ನಿರ್ವಹಿಸುವುದು ಸರ್ಕಾರದ ಜವಾಬ್ದಾರಿ.
ಸಾರಿಗೆ ಸಂಸ್ಥೆಗಳಲ್ಲಿನ ಆಡಳಿತಾತ್ಮಕ ಲೋಪಗಳು, ಹಣಕಾಸು ನಿರ್ವಹಣೆಯ ವೈಫಲ್ಯಗಳು, ಭ್ರಷ್ಟಾಚಾರದ ಆರೋಪಗಳು ಹಾಗೂ ಟಾಟಾ ಸಂಸ್ಥೆಯೊಂದಿಗಿನ ಒಪ್ಪಂದಗಳ ಪಾರದರ್ಶಕತೆ ಕುರಿತು ಸಮಗ್ರ ಸ್ವತಂತ್ರ ತನಿಖೆ ನಡೆಸಬೇಕು ಎಂದು ಸೀತಾರಾಮ್ ಗುಂಡಪ್ಪ ಆಗ್ರಹಿಸಿದರು.
ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ವಿಶೇಷ ಸಮಿತಿ ರಚಿಸಿ, ಕಾಳಸಂತೆ ಮತ್ತು ಅಕ್ರಮ ದಾಸ್ತಾನು ತಡೆಯಬೇಕು. ಪಡಿತರ ವ್ಯವಸ್ಥೆಯಲ್ಲಿ ಅಕ್ಕಿಯೊಂದಿಗೆ ಬೇಳೆ, ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ಆಹಾರ ಪದಾರ್ಥಗಳನ್ನು ರಿಯಾಯಿತಿ ದರದಲ್ಲಿ ವಿತರಿಸಬೇಕು. ಬರಗಾಲದಿಂದ ಸಂಕಷ್ಟಕ್ಕೀಡಾದ ರೈತರಿಗೆ ತಕ್ಷಣ ಬೆಳೆ ನಷ್ಟ ಪರಿಹಾರ, ಕುಡಿಯುವ ನೀರು ಮತ್ತು ಉದ್ಯೋಗ ಖಾತರಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಮಾತನಾಡಿ, ಬೆಂಗಳೂರಿನಲ್ಲಿ ಈಗಾಗಲೇ ವಾಹನ ದಟ್ಟಣೆ, ದುಬಾರಿ ಜೀವನ ವೆಚ್ಚ ಮತ್ತು ಅಸ್ಥಿರ ಜೀವನದಿಂದ ಜನತೆ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಉದ್ಯೋಗಿಗಳು, ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ದಿನಗೂಲಿ ನೌಕರರ ಕುಟುಂಬಗಳ ಮಾಸಿಕ ವೆಚ್ಚ ಮತ್ತಷ್ಟು ಹೆಚ್ಚಾಗಿ ಬೀದಿಗೆ ಬೀಳುವ ಪರಿಸ್ಥಿತಿಯಲ್ಲಿ ಇದ್ದಾರೆ.ಜನರ ಬದುಕಿನ ಮೂಲಭೂತ ಅಗತ್ಯಗಳನ್ನೇ ದುಬಾರಿಗೊಳಿಸುವ ಬದಲು ಶಿಕ್ಷಣ, ಆರೋಗ್ಯ, ಆಹಾರ ಮತ್ತು ಸಾರ್ವಜನಿಕ ಸಾರಿಗೆಯನ್ನು ಕೈಗೆಟುಕುವ ದರದಲ್ಲಿ ಒದಗಿಸುವ ಜನಪರ ಆಡಳಿತವನ್ನು ಸರ್ಕಾರ ಜಾರಿಗೆ ತರಬೇಕು ಎಂದು ನಾಯಕರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಶಶಿಧರ್ ಆರಾಧ್ಯ, ವಿಜಯ್ ಶರ್ಮಾ, ರವಿಕುಮಾರ್, ದಿಲೀಪ್ ಕುಮಾರ್ ಇರ್ತಾದ್ ಅಹ್ಮದ್, ಲಾಲಿ ಸುಲೇಮಾನ್, ಪುಷ್ಪ ಕೇಶವ್, ಲಕ್ಷ್ಮಿ
ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರುಗಳು ಭಾಗವಹಿಸಿದ್ದರು.
