ಗೋಕರ್ಣ: ಗೋಕರ್ಣದ ದುಬ್ಬಣಶಶಿ ಬೀಚ್ನಲ್ಲಿ ಸಮುದ್ರದ ಭಾರಿ ಅಲೆಗಳಿಗೆ ಸಿಲುಕಿ ಬೆಂಗಳೂರಿನ ಐಟಿ ಕಂಪನಿಯ ಮೂವರು ಟೆಕ್ಕಿಗಳು ಬಲಿಯಾಗಿದ್ದಾರೆ.
ಜಮ್ಷೆಡ್ಪುರ ಮೂಲದ
ಶೋಭಾ ದಾಸ್ (22),
ಬೆಂಗಳೂರಿನ ಮೊಹಮ್ಮದ್ ಅಕ್ರಮ್ (23),
ವಿಶ್ವೇಶ್ ಎ.ಕೆ. ಅಲಿಯಾಸ್ ವಿಶ್ವ (24) ಮೃತಪಟ್ಟ ಟೆಕ್ಕಿಗಳು.
ಬೆಂಗಳೂರಿನ ಬೆಳ್ಳಂದೂರಿನ ಅಲೋರಿಕಾ ಐಟಿ ಕಂಪನಿಯ 16 ಜನರ ತಂಡ ವೀಕೆಂಡ್ ಟ್ರಿಪ್ಗಾಗಿ ಗೋಕರ್ಣಕ್ಕೆ ಹೋಗಿತ್ತು.
ಅವರಲ್ಲಿ 5 ಮಂದಿ ದುಬ್ಬಣಶಶಿ ಬೀಚ್ ಸಮೀಪದ ಸಮುದ್ರಕ್ಕಿಳಿದು ಈಜುತ್ತಿದ್ದಾಗ ದೊಡ್ಡ ಅಲೆಗೆ ಸಿಲುಕಿದ್ದಾರೆ.
ಸ್ಥಳೀಯ ಮೀನುಗಾರರು ಮತ್ತು ಜೀವರಕ್ಷಕ ಸಿಬ್ಬಂದಿ ಇಬ್ಬರನ್ನು ರಕ್ಷಿಸಿದ್ದಾರೆ. ಉಳಿದ ಮೂವರು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಬೆಂಗಳೂರಿನ ಕಲ್ಯಾಣನಗರದ 24 ವರ್ಷದ ವಿಶ್ವ ಸಮುದ್ರದಲ್ಲಿ ನಾಪತ್ತೆಯಾಗಿದ್ದರು. ಇದೀಗ ಅವರ ಮೃತದೇಹ ಪತ್ತೆಯಾಗಿದೆ. ನಿಶಾಂತ್ ಮತ್ತು ಮಹಮ್ಮದ್ ಖಾಸಿಂ ಅವರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ನಡೆದ ಸ್ಥಳಕ್ಕೆ ಗೋಕರ್ಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹಗಳನ್ನು ಕಾರವಾರ ವೈದ್ಯಕೀಯ ಕಾಲೇಜಿನ ಶವಾಗಾರಕ್ಕೆ ಸ್ಥಳಾಂತರಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕರಾವಳಿ ಪ್ರದೇಶಗಳಲ್ಲಿ ಸಮುದ್ರದ ಅಲೆಗಳ ತೀವ್ರತೆಯನ್ನು ಲೆಕ್ಕಿಸದೆ ನೀರಿಗಿಳಿಯುವುದು ಅಪಾಯಕಾರಿ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
