ಮೈಸೂರು: ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಪ್ರಜಾಪ್ರಭುತ್ವದ ನಡೆ ಮತ್ತು ವಿಶಾಲ ಮನೋಭಾವವನ್ನು ಕನ್ನಡ ಕ್ರಾಂತಿದಳದ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಅವರು ಮುಕ್ತವಾಗಿ ಶ್ಲಾಘಿಸಿ, ಅಭಿನಂದಿಸಿದ್ದಾರೆ.
ಇತ್ತೀಚೆಗೆ ಮೈಸೂರು ರಾಜಮನೆತನ ಹಾಗೂ ಅರಮನೆ ಕುರಿತಾದ ಹೇಳಿಕೆಗೆ ಸಂಬಂಧಿಸಿದಂತೆ ವಿವಿಧ ಕನ್ನಡಪರ ಸಂಘಟನೆಗಳು ಮತ್ತು ಹೋರಾಟಗಾರರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ್ದರು.
ಆದರೂ ನವೆಂಬರ್ 1 ರ ಕನ್ನಡ ರಾಜ್ಯೋತ್ಸವದ ಅಧಿಕೃತ ಕಾರ್ಯಕ್ರಮದಲ್ಲಿ ಅದೇ ಕನ್ನಡ ಹೋರಾಟಗಾರರನ್ನು ಸನ್ಮಾನಿಸಿ, ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ ಸಚಿವ ಡಾ. ಯತೀಂದ್ರ ಅವರ ಪ್ರಜಾಪ್ರಭುತ್ವದ ನಡೆ ಮತ್ತು ವಿಶಾಲ ಮನೋಭಾವ ಅಭಿನಂದನಾರ್ಹ ಎಂದು ತೇಜಸ್ವಿ ಹೇಳಿಕೆ ನೀಡಿದ್ದಾರೆ.
ವೈಚಾರಿಕವಾಗಿ ಅಥವಾ ಸಾರ್ವಜನಿಕ ನಿಲುವುಗಳ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ಕನ್ನಡ ನಾಡು-ನುಡಿಗಾಗಿ ಶ್ರಮಿಸಿದ ಹೋರಾಟಗಾರರ ಸೇವೆಯನ್ನು ಗುರುತಿಸಿ ಗೌರವಿಸುವುದು ಒಬ್ಬ ಜವಾಬ್ದಾರಿಯುತ ನಾಯಕನ ಕರ್ತವ್ಯವಾಗಿದೆ. ತಮ್ಮನ್ನು ವಿರೋಧಿಸಿದ ಹೋರಾಟಗಾರರೆಂಬ ಯಾವುದೇ ಪೂರ್ವಾಗ್ರಹ ಪೀಡಿತ ಭಾವನೆ ಇಟ್ಟುಕೊಳ್ಳದೆ, ಕನ್ನಡ ರಾಜ್ಯೋತ್ಸವದ ವೇದಿಕೆಯಲ್ಲಿ ಸಚಿವರು ನಡೆದುಕೊಂಡ ರೀತಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವಂತಿದೆ ಎಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಮೈಸೂರು ದಸರಾ ಸಂಪ್ರದಾಯ ಹಾಗೂ ಅರಮನೆಯ ಮಾಲೀಕತ್ವದ ಕುರಿತು ಸಚಿವ ಯತೀಂದ್ರ ಅವರು ನೀಡಿದ್ದ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿತ್ತು.
ಮೈಸೂರು ರಾಜಮನೆತನಕ್ಕೆ ಕೀಳಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಹಲವು ಕನ್ನಡಪರ ಸಂಘಟನೆಗಳು ಹಾಗೂ ನಾಗರಿಕ ವೇದಿಕೆಗಳು ಸಚಿವರ ವಿರುದ್ಧ ಪ್ರತಿಭಟನೆ ನಡೆಸಿ, ಕ್ಷಮೆಯಾಚನೆಗೆ ಆಗ್ರಹಿಸಿದ್ದವು.
ಈ ಎಲ್ಲ ರಾಜಕೀಯ ಹಾಗೂ ಸಾಮಾಜಿಕ ಬಿಸಿ ವಾತಾವರಣದ ನಡುವೆಯೂ, ಮೈಸೂರಿನಲ್ಲಿ ನಡೆದ 71ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವರು ನಾಡಿನ ಸಾಧಕರು ಮತ್ತು ಹೋರಾಟಗಾರರನ್ನು ಪ್ರಶಸ್ತಿ ನೀಡಿ ಗೌರವಿಸುವ ಮೂಲಕ ಮಾದರಿ ನಡೆ ಪ್ರದರ್ಶಿಸಿದ್ದಾರೆ.
ಸಚಿವರ ಈ ಸೌಹಾರ್ದಯುತ ಮತ್ತು ಪ್ರೌಢ ರಾಜಕೀಯ ನಡೆಗೆ ಕನ್ನಡ ಕ್ರಾಂತಿದಳವು ಹರ್ಷ ವ್ಯಕ್ತಪಡಿಸಿದೆ.
ನಾಡು-ನುಡಿಯ ಹಿತದೃಷ್ಟಿಯಿಂದ ಇಂತಹ ಆರೋಗ್ಯಕರ ಬೆಳವಣಿಗೆಗಳು ಮುಂದುವರಿಯಲಿ ಎಂದು ತೇಜಸ್ವಿ ನಾಗಲಿಂಗಸ್ವಾಮಿ ತಿಳಿಸಿದ್ದಾರೆ.
