ಮೈಸೂರು: ಕಳೆದ ಅಕ್ಟೋಬರ್ 23 ರಂದು ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ 4 ಕ್ಷೇತ್ರಗಳಲ್ಲೂ ಎನ್.ಡಿ.ಎ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಂತಸ ಹಂಚಿಕೊಂಡರು.
ನಗರದಲ್ಲಿ ಬುಧವಾರ ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆಯನ್ನು ಅಳಿಸಿ ಎಂಬ ಶೀರ್ಷಿಕೆಯಡಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ 23 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಪ್ರತಿಯೊಂದು ಕ್ಷೇತ್ರದಲ್ಲೂ ನಮ್ಮ ಅಭ್ಯರ್ಥಿಗಳು ವಿಜಯ ಸಾಧಿಸಿದ್ದಾರೆ. ಸೋಲಿಲ್ಲದ ಸರದಾರ ಎಂದು ಮೆರೆಯುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿಯನ್ನು 900ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಸೋಲಿಸಲಾಗಿದೆ. ರಾಜ್ಯದ ಪ್ರಜ್ಞಾವಂತ ಮತದಾರರಿಗೆ, ಬಿಜೆಪಿ-ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು
ಈ ಫಲಿತಾಂಶ ನಾನಾ ರೀತಿಯ ವಿಶ್ಲೇಷಣೆಗೆ ಕಾರಣವಾಗಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಭ್ರಮೆಯಲ್ಲಿದೆ. ಅಧಿಕಾರದ ಅಮಲಿನಲ್ಲಿ ತೇಲುತ್ತಿದೆ. ನಾಡಿನ ರೈತರ ಜೊತೆ ಚೆಲ್ಲಾಟವಾಡಿ ಒಂದೇ ಒಂದು ಕೆಲಸ ಮಾಡಿಲ್ಲ. ಬರಗಾಲದ ಪರಿಹಾರ ಕೊಡಲು ಸಾಧ್ಯವಾಗಿಲ್ಲ, ಉದ್ಯೋಗ ಕೊಡಲು ಆಗುತ್ತಿಲ್ಲ. ಮೂಡಾ ಹಗರಣ, ವಾಲ್ಮೀಕಿ ಹಗರಣ, ಸಚಿವರ ರಾಜೀನಾಮೆ ಇದೇ ಕಾಂಗ್ರೆಸ್ ಆಡಳಿತ. ಬಳ್ಳಾರಿ ಚಲೋ ಮೂಲಕ ಕಾಂಗ್ರೆಸ್ ಬಣ್ಣ ಬಯಲು ಮಾಡಿದ್ದೇವೆ. ನಮ್ಮ ಹೋರಾಟದ ಪರಿಣಾಮ ಜನರು ಈ ಬಾರಿ ಎನ್.ಡಿ.ಎ ಸರ್ಕಾರ ತರಲು ಚಿಂತನೆ ನಡೆಸಿದ್ದಾರೆ ಎಂದು ತಿಳಿಸಿದರು.
ಈ ಚುನಾವಣೆ ಫಲಿತಾಂಶ 120 ರಿಂದ 130 ಕ್ಷೇತ್ರದ ಮತದಾರರು ಕೊಟ್ಟಿರುವ ತೀರ್ಪು. ಸಿಎಂ ಮತ್ತು ಡಿಸಿಎಂ ಕಪಟ ನಾಟಕ ಆಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ಬುಡಸಮೇತ ಕಿತ್ತು ಹಾಕುವ ತೀರ್ಮಾನಕ್ಕೆ ಜನ ಬಂದಿದ್ದಾರೆ. ರಾಜ್ಯದ ಹಣಕಾಸಿನ ಪರಿಸ್ಥಿತಿ ಹದಗೆಟ್ಟಿದೆ. ಇದು ಮೊದಲು ಅಧಿಕಾರ ಬಿಟ್ಟು ಹೋಗಿ ಎಂಬ ಸಂದೇಶ. ಬಿಜೆಪಿಗೆ ಆಶೀರ್ವಾದ ಮಾಡಲು ಮತದಾರರು ರೆಡಿಯಾಗಿದ್ದಾರೆ. ನಿಮ್ಮ ಸಣ್ಣಪುಟ್ಟ ಗೊಂದಲ ಬದಿಗಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಹೋಗಿ ಎಂಬ ಸಂದೇಶವನ್ನು ಜನರು ಬಿಜೆಪಿಗೂ ಕೊಟ್ಟಿದ್ದಾರೆ ಎಂದು ವಿಜಯೇಂದ್ರ ಹೇಳಿದರು.
ಪ್ರಧಾನಿಯಾಗುವ ಆಸೆಗೆ ರಾಹುಲ್ ಗಾಂಧಿ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಮುಂದಾಗಿದ್ದಾರೆ. ಈ ಚುನಾವಣೆ ಅವರಿಗೂ ಸ್ಪಷ್ಟ ಸಂದೇಶ. ಬ್ಯಾಲೆಟ್ ಪೇಪರ್ ಬಳಸಿ ನಡೆಸಿದ ಈ ಚುನಾವಣೆಯಲ್ಲೂ ಕಾಂಗ್ರೆಸ್ ಸೋತಿದೆ. ಕಾಂಗ್ರೆಸ್ ಗೆ ಯಾವುದರ ಮೇಲೂ ನಂಬಿಕೆ ಇಲ್ಲ. ಈ ಫಲಿತಾಂಶವನ್ನು ಸಿಎಂ, ಡಿಸಿಎಂ ಮತ್ತು ರಾಹುಲ್ ಗಾಂಧಿಗೆ ತಲುಪಿಸಬೇಕು. ಮುಂದಿನ ಬಾರಿ ರಾಜ್ಯದಲ್ಲಿ ಎನ್.ಡಿ.ಎ ಸರ್ಕಾರ ಬರುವುದು ಖಚಿತ ಎಂದು ಭವಿಷ್ಯ ನುಡಿದರು.
ರಾಜ್ಯದಲ್ಲಿ ಬರವಿದೆ, ಪರಿಹಾರ ಘೋಷಣೆ ಮಾಡಿದರೂ ಅದು ಘೋಷಣೆಯಾಗಿ ಉಳಿದಿದೆ. ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ಕೊಡುತ್ತಾರೆ ಎಂದು ಜನ ಕಾಯುತ್ತಿದ್ದರು. ವಿಶೇಷ ವಿಮಾನದಲ್ಲಿ ಸಿಎಂ ಬೆಳಗಾವಿಗೆ ಹೋಗಿ, ಬೊಕ್ಕಸದಲ್ಲಿ ಹಣ ಇಲ್ಲ, ನಮಗೆ ಸಮಯ ಕೊಡಿ ಎಂದಿದ್ದಾರೆ. ಇದು ನಾಚಿಕೆಗೇಡು ಎಂದು ಟೀಕಿಸಿದರು.
ಕಬ್ಬಿನ ಉಪ ಉತ್ಪನ್ನಗಳಿಂದ ಲಾಭ ಬರುತ್ತಿದೆ. ಪ್ರತಿ ಟನ್ ಕಬ್ಬಿಗೆ 9234 ರೂಪಾಯಿ ರಾಜ್ಯ ಸರ್ಕಾರಕ್ಕೆ ಬರುತ್ತದೆ. ಪ್ರತಿ ವರ್ಷ 15 ಸಾವಿರ ಕೋಟಿ ಆದಾಯ ಕಬ್ಬಿನಿಂದ ಬರುತ್ತಿದೆ. ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಬಿಟ್ಟು, ರೈತರಿಗೆ 500 ರೂಪಾಯಿ ಪ್ರೋತ್ಸಾಹ ಧನ ನೀಡಿ, ರೈತರ ಜೀವನದ ಜೊತೆ ಚೆಲ್ಲಾಟ ಆಡುವುದನ್ನು ಬಿಡಿ ಎಂದು ಬಿ.ವೈ.ವಿಜಯೇಂದ್ರ ಕಾಂಗ್ರೆಸ್ ಸರ್ಕಾರಕ್ಕೆ ಸಲಹೆ ನೀಡಿದರು.
ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾಲಿಗೆ ಹರಿಬಿಟ್ಟವರಿಗೆ ಜನ ಬುದ್ಧಿ ಕಲಿಸುತ್ತಾರೆ. ನಿನ್ನೆಯ ಚುನಾವಣೆ ಫಲಿತಾಂಶ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ. ನಾವು 130 ಸೀಟು ಗೆಲ್ಲುತ್ತೇವೆ. ಇದು ಅಹಂಕಾರದ ಮಾತಲ್ಲ, ಆತ್ಮವಿಶ್ವಾಸದ ಮಾತು ಎಂದು ಸಮರ್ಥಿಸಿಕೊಂಡರು.
ಮುಂದಿನ ಚುನಾವಣೆಯಲ್ಲಿ ವರುಣಾದಲ್ಲಿ ನಿಲ್ಲುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಕಾದು ನೋಡಿ, ಸಮಯ ಉತ್ತರ ಕೊಡುತ್ತದೆ ಎಂದು ನುಡಿದರು.
ರಾಜಮನೆತನದ ಬಗ್ಗೆ ಸಚಿವ ಯತೀಂದ್ರ ಈ ರೀತಿ ಹೇಳಿಕೆ ನೀಡುವುದು ಅಕ್ಷಮ್ಯ ಅಪರಾಧ, ಅವರ ಹೇಳಿಕೆ ಖಂಡನೀಯ. ಯದುವಂಶಸ್ಥರನ್ನು ಅಪಮಾನ ಮಾಡುವುದು ಸರಿಯಲ್ಲ. ಇದು ಉದ್ಧಟತನ, ಅವಿವೇಕತನದ ಹೇಳಿಕೆ, ನೀಚತನದ ಪರಮಾವಧಿ. ಸ್ವಲ್ಪವಾದರೂ ಗೌರವವಿದ್ದರೆ ಕೂಡಲೇ ಸಿಎಂ, ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲರೂ ಕ್ಷಮೆ ಕೇಳಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.
