ಚನ್ನೈ: ಜೈಲು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ 17 ಕೈದಿಗಳು ಪರಾರಿಯಾದ ಸಿನಿಮೀಯ ಘಟನೆ ತಮಿಳುನಾಡಿನ ಥೇನಿ ಜಿಲ್ಲೆ, ತೆಕ್ಕಂಪಟ್ಟಿ ಉಪ-ಜೈಲಿನಲ್ಲಿ ನಡೆದಿದೆ.
ಜೈಲಿನಿಂದ ಪರಾರಿಯಾದ ಕೈದಿಗಳ ಪೈಕಿ ಒಬ್ಬನನ್ನು ಈಗಾಗಲೇ ಬಂಧಿಸಲಾಗಿದ್ದು, ಉಳಿದವರ ತಲಾಷಿಗಾಗಿ ಪೊಲೀಸರು 17 ವಿಶೇಷ ತಂಡಗಳನ್ನು ನಿಯೋಜಿಸಿದ್ದಾರೆ.
ಪರಾರಿಯಾದ 17 ಕೈದಿಗಳನ್ನು ಒಂದೇ ಸೆಲ್ ನಲ್ಲಿ ಇರಿಸಲಾಗಿತ್ತು. ಕೈದಿಗಳಲ್ಲಿ ಒಬ್ಬನಿಗೆ ಹುಷಾರಿಲ್ಲ ಎಂಬ ಮಾಹಿತಿ ತಿಳಿದು ಜೈಲು ಸಿಬ್ಬಂದಿ ಕೊಠಡಿ ಪ್ರವೇಶಿಸಿದಾಗ ಈ ಕೈದಿಗಳು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಓಡಿಹೋಗಿದ್ದಾರೆ.
ಕೈದಿಗಳು ತಾವು ಪರಾರಿಯಾಗಲು ಪ್ರಿ ಪ್ಲ್ಯಾನ್ ಮಾಡಿದ್ದರು ಫಿಟ್ಸ್ ಬಂದಂತೆ ನಾಟಕ ವಾಡಿದ್ದಾರೆ.
ಘಟನೆಯಲ್ಲಿ ಥೇನಿ ಜಿಲ್ಲಾ ಜೈಲಿಗೆ ನಿಯೋಜಿತರಾಗಿದ್ದ ದರ್ಜೆ-2 (ಗ್ರೇಡ್-2) ಪೊಲೀಸ್ ಸಿಬ್ಬಂದಿ ತಂಗಪಾಂಡಿ ಅವರ ತಲೆಗೆ ಗಾಯವಾಗಿದ್ದು, ಅವರನ್ನು ಜಿ. ವಿಲಕ್ಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಜೈಲು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಪರಾರಿಯಾದ ಉಳಿದ ಕೈದಿಗಳನ್ನು ಪತ್ತೆಹಚ್ಚಲು ಪೊಲೀಸರು ತೀವ್ರ ಕಾರ್ಯಾಚರಣೆ ಆರಂಭಿಸಿದ್ದಾರೆ. ನೆರೆಯ ಜಿಲ್ಲೆಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪೊಲೀಸರು ಎಲ್ಲಾ ವಾಹನಗಳನ್ನು ತಪಾಸಣೆ ಮಾಡುತ್ತಿದ್ದು, ಕೈದಿಗಳು ಪರಾರಿಯಾಗಲು ಬಳಸಿಕೊಂಡಿರಬಹುದಾದ ಮಾರ್ಗಗಳ ಮೇಲೆ ತೀವ್ರ ನಿಗಾ ಇರಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ನೆರೆಯ ಜಿಲ್ಲೆಯ 16 ಕಡೆಗಳಲ್ಲಿ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ, ದಿಂಡಿಗಲ್-ಥೇನಿ ಹೆದ್ದಾರಿಯಲ್ಲಿ ವಾಹನ ತಪಾಸಣೆಯನ್ನು ಕೂಡ ತೀವ್ರಗೊಳಿಸಲಾಗಿದೆ.
ಮಧುರೈ, ದಿಂಡಿಗಲ್ ಮತ್ತು ಇಡುಕ್ಕಿ ಪೊಲೀಸರನ್ನು ಎಚ್ಚರಿಸಲಾಗಿದೆ. ಪರಾರಿಯಾದ ಕೈದಿಗಳನ್ನು ಗುರುತಿಸಲು ಮತ್ತು ಬಂಧಿಸಲು ಅನುಕೂಲವಾಗುವಂತೆ ಅವರ ಪೋಟೋಗಳನ್ನು ಅಧಿಕಾರಿಗಳಿಗೆ ಹಂಚಲಾಗಿದೆ.
