ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಅವರ ತಂದೆಯವರ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ
ನಾಲಿಗೆ ಜಾರಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಹೆಚ್ ಡಿ ಕೆ,
ಸಾರ್ವಜನಿಕ ಜೀವನದಲ್ಲಿ ಸುದೀರ್ಘ ಹಿರಿತನವಿದ್ದರೂ ಮಾತಿನಲ್ಲಿ ಅವರು ತೋರಿದ ಸಣ್ಣತನ ಕ್ಷಮಾರ್ಹವಲ್ಲ ಎಂದಿದ್ದಾರೆ.
ರಾಷ್ಟ್ರದ ಪ್ರಧಾನಿಗಳಾದ ನರೇಂದ್ರ ಮೋದಿ ಅವರ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಅವಹೇಳನಕಾರಿ ಮಾತ್ರವಲ್ಲ, ರಾಜಕೀಯ ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆ. ಅವರ ಮಾತು ಮಾನವೀಯತೆಯ ಅಣಕ ಹಾಗೂ ಅವರಲ್ಲಿ ಅಡಗಿರುವ ನಿಗೂಢ ಕ್ರೂರ ಮನಃಸ್ಥಿತಿಯ ಪ್ರತೀಕ ಎಂದು ಕಿಡಿಕಾರಿದ್ದಾರೆ.
ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ’ ಎಂದು ಶ್ರೀ ಪುರಂದರದಾಸರು ಸುಮ್ಮನೆ ಹೇಳಿದ್ದಲ್ಲ, ಬಹುಶಃ ಇಂಥ ನಾಲಿಗೆಗಳನ್ನು ತಿದ್ದಬೇಕು ಎಂಬ ಉದ್ದೇಶದಿಂದಲೇ ಹೇಳಿರಬೇಕು. ಖರ್ಗೆ ಅವರ ಹೇಳಿಕೆಯನ್ನು ಖಂಡಿಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.
