ಮೈಸೂರು: ಪರಂಪರೆಯನ್ನು ನೆನಪಿಸಿಕೊಂಡರೆ ಮಾತ್ರ ಮೈಸೂರಿನ ಅಸ್ಮಿತೆ ಉಳಿಯಲಿದೆ ಎಂದು ಪರಂಪರೆ ತಜ್ಞ ಪ್ರೊ.ಎನ್.ಎಸ್.ರಂಗರಾಜು ಅಭಿಪ್ರಾಯ ಪಟ್ಟರು.
ಕರ್ನಾಟಕ ರಾಜ್ಯ ಪುರಾತತ್ತ್ವ, ವಸ್ತುಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಸಹಯೋಗದಲ್ಲಿ ಹಿರಿಯ ಪತ್ರಕರ್ತ ಹಾಗೂ ಪರಂಪರೆ ತಜ್ಞ ಈಚನೂರು ಕುಮಾರ್ ನೆನಪಿನಲ್ಲಿ ಆಯೋಜಿಸಿದ್ದ ಪಾರಂಪರಿಕ ನಡಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೈಸೂರಿನ ಪರಂಪರೆಯನ್ನು ಇತಿಹಾಸದ ದಾಖಲೆಗಳ ಮೂಲಕ ಪತ್ರಕರ್ತ ಈಚನೂರು ಕುಮಾರ್ ಜನರಿಗೆ ಸರಳವಾಗಿ ತಿಳಿಸಿದ್ದಾರೆ ಎಂದು ಸ್ಮರಿಸಿದರು.
ಈಚನೂರು ಕುಮಾರ್ ಮೈಸೂರಿನ ಪತ್ರಾಗಾರ ಇಲಾಖೆಯಲ್ಲಿ ಕರ್ನಾಟಕ ಸರ್ಕಾರ ಸಂರಕ್ಷಿಸಿರುವ ಸಾವಿರಾರು ದಾಖಲೆಗಳನ್ನು ಓದಿ, ಅರ್ಥೈಸಿಕೊಂಡು ತಮ್ಮ ಲೇಖನಗಳ ಮೂಲಕ ಜನರಿಗೆ ತಿಳಿಸಿದರು. ಪಾರಂಪರಿಕ ನಡಿಗೆಯಲ್ಲಿ ವೀಕ್ಷಕ ವಿವರಣೆ ನೀಡುವ ಮೂಲಕ ಪರಂಪರೆಯನ್ನು ಜನರಿಗೆ ತಲುಪಿಸಿದರು ಎಂದು ಹೇಳಿದರು.
ಪಾರಂಪರಿಕ ಸಮಿತಿ ಸದಸ್ಯರೂ ಆಗಿದ್ದ ಈಚನೂರು ಕುಮಾರ್, ತಮ್ಮ ಕಠಿಣ ನಿಲುವುಗಳ ಮೂಲಕ ಲ್ಯಾನ್ಸ್ಡೌನ್ ಬಜಾರ್ ಕಟ್ಟಡ, ದೇವರಾಜ ಮಾರುಕಟ್ಟೆ ಕಟ್ಟಡಗಳಂತಹ ಪರಂಪರೆ ಹೆಗ್ಗುರುತುಗಳ ಉಳಿವಿಗೆ ಗಟ್ಟಿ ಧ್ವನಿಯಾಗಿದ್ದರು ಎಂದು ಪ್ರೊ.ರಂಗರಾಜು ತಿಳಿಸಿದರು.
ಪತ್ರಾಗಾರ ಇಲಾಖೆಯ ನಿವೃತ್ತ ನಿರ್ದೇಶಕ ಡಾ.ಗವಿಸಿದ್ದಯ್ಯ ಮಾತನಾಡಿ, ಮೂಲ ದಾಖಲೆಗಳ ಓದುವಿಕೆಯಲ್ಲೂ ಕುಮಾರ್ ಪರಿಣತಿ ಹೊಂದಿದ್ದರು. ಪತ್ರಕರ್ತರಾಗಿ ತಮ್ಮ ಆಸಕ್ತಿಯ ಕಾರಣಕ್ಕೆ ದಾಖಲೆಗಳ ವಿಚಾರಗಳನ್ನೇ ಬರೆದರು, ನುಡಿದರು ಎಂದು ತಿಳಿಸಿದರು.
ಪಾರಂಪರಿಕ ನಡಿಗೆ ಕಾರ್ಯಕ್ರಮದಲ್ಲಿ ಪ್ರೊ.ರಂಗರಾಜು ಹಾಗೂ ಡಾ.ಗವಿಸಿದ್ದಯ್ಯ ಅವರು ನಗರದ ಪುರಭವನದಿಂದ ಆರಂಭವಾಗಿ ಸಿಲ್ವರ್ ಜುಬಿಲಿ ಕ್ಲಾಕ್ ಟವರ್, ಫ್ರೀಮೆಸನ್ಸ್ ಕ್ಲಬ್, ಅಶೋಕ ರಸ್ತೆ, ಹತ್ತನೇ ಚಾಮರಾಜೇಂದ್ರ ಒಡೆಯರ್ ಪ್ರತಿಮೆ ವೃತ್ತ ಹಾಗೂ ಅಂಬಾವಿಲಾಸ ಅರಮನೆ ಕುರಿತ ಅನೇಕ ಸಂಗತಿ ಹಾಗೂ ವಾಸ್ತುಶಿಲ್ಪಗಳ ಬಗ್ಗೆ ವಿವರಣೆ ನೀಡಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತರು, ಇತಿಹಾಸ ಆಸಕ್ತರು ಹಾಗೂ ಈಚನೂರು ಕುಮಾರ್ ಕುಟುಂಬದ ಅಕ್ಷರ ಎಂ.ಕೆ., ಕಿರಣ್ ಎನ್., ನಚಿಕೇತ ಕೆ., ಅಜಿತ್ ಎಂ.ಕೆ., ಸೀತಾರಾಮ್, ಗುರುಪ್ರಸಾದ್ ತುಂಬಸೋಗೆ, ರಂಗಸ್ವಾಮಿ ಮಾದಾಪುರ, ಸಾಗರ್ ಜೇವೂರ್, ಶೈಲಜೇಶ್, ಸ್ವರ್ಣ ಕಿತ್ತೂರು, ಮಹೇಶ್ ಹಿರೇಮಠ್, ಅನೀಕ್ಷಿತ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
