ಮೈಸೂರು: ಮಾನಸಗಂಗೋತ್ರಿಯ ಎಸ್ಜೆಸಿಇ ಕಾಲೇಜು ಕ್ಯಾಂಟೀನ್ ಮುಂಭಾಗ ವಿದ್ಯಾರ್ಥಿ ಮೇಲೆ ಹಲ್ಲೆ ನಡೆದಿರುವ ಸಂಬಂಧ ಜಯಲಕ್ಷ್ಮೀಪುರಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅ.23ರಂದು ಸಂಜೆ 6.30ರಿಂದ 7.30ರ ನಡುವೆ ಚದುರಂಗ ರಸ್ತೆಯ ಎಸ್ಜೆಸಿಇ ಕಾಲೇಜು ಕ್ಯಾಂಟೀನ್ ಎದುರು ಘಟನೆ ನಡೆದಿದೆ. ಕುವೆಂಪುನಗರ ನಿವಾಸಿ,ಮೊದಲ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಪ್ರದ್ಯುಮ್ನ (19) ಈ ಸಂಬಂಧ ದೂರು ನೀಡಿದ್ದರು.
ಅವರ ದೂರಿನ ಪ್ರಕಾರ ಸ್ಕೂಟರ್ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಕಾಲೇಜಿನ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದು, ಆರೋಪಿ ಪ್ರೀತಮ್ ಮತ್ತು 6-7 ಜನರ ಗುಂಪು ಏಕಾಏಕಿ ಹಲ್ಲೆ ನಡೆಸಿದ್ದಾರೆ. ಮುಖ, ತಲೆ ಮತ್ತು ಮೈಕೈಗೆ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.
ಗಾಯಗೊಂಡ ವಿದ್ಯಾರ್ಥಿ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಅ.23ರ ರಾತ್ರಿ 11.45ಕ್ಕೆ ವೈದ್ಯರ ಸಮ್ಮುಖದಲ್ಲಿ ಹೇಳಿಕೆ ನೀಡಿದ್ದಾರೆ. ಹೇಳಿಕೆ ಆಧರಿಸಿ ಅ.24ರಂದು ಜಯಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳು ತಮ್ಮ ಕಾಲೇಜಿನ ವಿದ್ಯಾರ್ಥಿಗಳಾದ ಕೃತಿಕ್, ಅಲ್ಲಾನಾ, ಶ್ರೀಕರ್ ಮತ್ತು ಆತನ ಸ್ನೇಹಿತರು ಎಂದು ದೂರುದಾರ ತಿಳಿಸಿದ್ದು,ಪೊಲೀಸರು ತನಿಖೆ ನಡೆಸುತ್ತಿದ್ದಾರೆ
