ಮೈಸೂರು: ರಾಜ್ಯಾದಲ್ಲಿ ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ವಿಚಾರವಾಗಿ ನಾವು ದೂರು ದಾಖಲಿಸಿದ್ದೇವೆ. ಪೊಲೀಸರು ಪ್ರಾಮಾಣಿಕವಾಗಿ ತನಿಖೆ ನಡೆಸುವಂತೆ ಮನವಿ ಮಾಡಿದ್ದೇವೆ ಅವರ ಮೇಲೆ ವಿಶ್ವಾಸವಿದೆ ಎಂದು ಸಚಿವ ಡಾ.ಯತೀಂದ್ರ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ತನಿಖೆಯ ಜವಾಬ್ದಾರಿ ಪೊಲೀಸರ ಮೇಲಿದೆ. ಯಾರು ಆರೋಪಿಗಳಿದ್ದಾರೆ ಅವರನ್ನು ಹುಡುಕಿ ಹಿಡಿಯುತ್ತಾರೆ ಎಂಬ ವಿಶ್ವಾಸ ಇದೆ. ಸ್ಟಿಂಗ್ನಲ್ಲಿರುವ ಇಬ್ಬರನ್ನು ಬಂಧಿಸಿ ವಿಚಾರಿಸಿ, ಅವರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು. ಈ ಉದ್ದೇಶದಿಂದಲೇ ತಂದೆಯವರು ಮೊದಲಿನಿಂದ ಆಗ್ರಹ ಮಾಡುತ್ತಿದ್ದಾರೆ, ಆ ಕಾರಣಕ್ಕೆ ದೂರು ನೀಡಿದ್ದಾರೆ ಎಂದು ಹೇಳಿದರು.
ಸರ್ಕಾರಕ್ಕೆ ಪ್ರಮೋದಾದೇವಿ ಒಡೆಯರ್ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತೀಂದ್ರ, ನಾವು ಮೊದಲಿನಿಂದಲೂ ಅವರ ಸಂಪರ್ಕದಲ್ಲಿದ್ದೇವೆ. ಅವರಿಗೆ ಅಧಿಕೃತ ಸ್ವಾಗತ ಕೋರಿದ್ದೇವೆ, ಮೊದಲಿನಿಂದಲೂ ಎಲ್ಲ ಸಹಕಾರ ನೀಡಿದ್ದೇವೆ. ವಿಜಯದಶಮಿ ದಿನ ಜಟ್ಟಿಕಾಳಗದ ದಿನ ಗೊಂದಲ ಆಗಿದೆ, ಅದನ್ನು ಹೊರತುಪಡಿಸಿ ಯಾವುದೇ ತೊಂದರೆ ಆಗಿಲ್ಲ. ಆದರೂ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ, ಸರ್ಕಾರ ಅದಕ್ಕೆ ಸ್ಪಷ್ಟ ಉತ್ತರ ಕೊಡಲಿದೆ ಎಂದು ತಿಳಿಸಿದರು.
ಏಳು ದಿನ ದಸರಾ ಬೇಡ, ಎರಡು ದಿನ ಅರಮನೆ ಮುಕ್ತವಾಗಿಡಿ ಎಂಬ ರಾಜಮಾತೆಯವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಸರ್ಕಾರದಿಂದ ಅಧಿಕೃತ ಉತ್ತರ ನೀಡಲಾಗುವುದು. ಈ ಕುರಿತು ಏನನ್ನೂ ಹೇಳಲು ಬಯಸುವುದಿಲ್ಲ. ಅವರ ಜತೆ ಮಾತನಾಡಲು ಸಿದ್ಧರಿದ್ದೇವೆ, ಅವರು ಕರೆದರೆ ಹೋಗಿ ಮಾತನಾಡುತ್ತೇವೆ. ಪ್ರತಿ ವರ್ಷ ಇಂತಹ ತೊಂದರೆ ಉಂಟಾಗುತ್ತದೆ ಜನ ಸೇರುವಾಗ ಏನೂ ಮಾಡಲು ಆಗಲಾರದು ಎಂದು ಹೇಳಿದರು.
ಪ್ಯಾಲೇಸ್ ಬೋರ್ಡ್ ಸರ್ಕಾರದ್ದು, ಜಾಗ ಸರ್ಕಾರದ್ದು. ರಾಜಮನೆತನಕ್ಕೆ ಏನು ಗೌರವ ಕೊಡಬೇಕು, ಅವರನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಲ್ಲವನ್ನೂ ಹಿಂದಿನಿಂದಲೂ ಮಾಡಿಕೊಂಡು ಬರಲಾಗಿದೆ ಈಗಲೂ ಮುಂದುವರಿಸಿಕೊಂಡು ಬಂದಿದ್ದೇವೆ. ಸಮಸ್ಯೆಗಳಿದ್ದರೆ ಸರ್ಕಾರಕ್ಕೆ ನೇರವಾಗಿ ಹೇಳಲಿ, ಖಂಡಿತವಾಗಿಯೂ ಅದನ್ನು ಬಗೆಹರಿಸಲು ನಾವು ಸಿದ್ಧರಿದ್ದೇವೆ ಎಂದು ಡಾ.ಯತೀಂದ್ರ ಸ್ಪಷ್ಟಪಡಿಸಿದರು.
ಸಮನ್ವಯದ ಅಗತ್ಯ ಇದೆಯೇ ಎಂಬ ಪ್ರಶ್ನೆಗೆ, ಖಂಡಿತವಾಗಿಯೂ ರಾಜಮನೆತನ- ಸರ್ಕಾರದ ನಡುವೆ ಸಮನ್ವಯತೆ ಅಗತ್ಯವಿದೆ, ಹೈಕೋರ್ಟ್ ಹೋಗಿಬಿಡ್ತೀವಿ, ಅಂಬಾರಿ ಕೊಡಲ್ಲ ಎಂಬ ವಿಚಾರ, ಅಂತಹ ಅವಕಾಶಕ್ಕೆ ಮುಂದಾದರೆ ಹೋಗಲಿ, ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳುತ್ತದೆ. ಆದರೆ ಅದರ ಅವಶ್ಯಕತೆಯೇ ಉದ್ಭವಿಸಲ್ಲ, ನಾವು ಮಾತುಕತೆ ಮೂಲಕ ಮುಂದುವರಿಯುತ್ತೇವೆ ಎಂದು ಹೇಳಿದರು.
1971ರಿಂದ ಸರ್ಕಾರ ಅಧಿಕೃತ ದಸರಾ ನಡೆಸುತ್ತಿದೆ, ಸ್ವಾತಂತ್ರ್ಯ ಬಂದ ಮೇಲೆ ನಾಡಹಬ್ಬ ಆಗಿದೆ, ಪ್ರಜಾಪ್ರಭುತ್ವದಲ್ಲಿ ಸರ್ಕಾರ ದಸರಾ ನಡೆಸುತ್ತಿದೆ. ಹೀಗಾಗಿ ನಾವು ಮುಂದುವರಿಸುತ್ತೇವೆ. ಪತ್ರದಲ್ಲಿ ಏನೇ ಬರೆದಿರಲಿ ಸಮಸ್ಯೆ ಬಗೆಹರಿಸಲು ನಾವು ಸಿದ್ಧ, ಸಿಎಂ ಸೇರಿ ಯಾರಾದರೂ ಮಾತನಾಡುತ್ತಾರೆ ಎಂದು ಹೇಳಿದರು.
ದಸರಾ ನಡೆಸುವುದು ಸರ್ಕಾರ, ಸರ್ಕಾರ ನಡೆಸುವ ದಸರಾಗೆ ಅವಕಾಶ ಮಾಡಿಕೊಡಬೇಕು, ಅದೇ ರೀತಿ ರಾಜಮನೆತನ ದಸರಾ ನಡೆಸಲು ನಾವೂ ಅವಕಾಶ ಮಾಡಿಕೊಡಬೇಕು. ಅವರು ಧಾರ್ಮಿಕ ಕಾರ್ಯ ನಡೆಸಲು ಸ್ವತಂತ್ರರು, ಖಾಸಗಿ ದಸರಾ ನಡೆಸಲು ಅವಕಾಶವಿದೆ, ಹೀಗಾಗಿ ಸಮನ್ವಯತೆ ಮುಖ್ಯವಾಗಿದೆ ಎಂದು ಯತೀಂದ್ರ ಸ್ಪಷ್ಟವಾಗಿ ಹೇಳಿದರು.
ಅಂಬಾರಿ ನಮ್ಮದು ಎಂಬ ರಾಜಮಾತೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಜಂಬೂಸವಾರಿ ದಿನ ಅಂಬಾರಿ ಪಡೆದು ಉತ್ಸವ ಮಾಡುತ್ತೇವೆ, ಅದನ್ನು ಫ್ರೀಯಾಗಿ ಪಡೆಯುತ್ತಿಲ್ಲ, ದುಡ್ಡು ಕೊಟ್ಟು ಪಡೆದು ನಂತರ ವಾಪಸ್ ನೀಡುತ್ತೇವೆ ಎಂದು ತಿಳಿಸಿದರು.
