ಮೈಸೂರು: ಕನ್ನಡ ನೆಲ, ಜಲ ಹಾಗೂ ಭಾಷೆಯ ಉಳಿವಿಗಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಹೋರಾಟಗಳಲ್ಲಿ ಭಾಗವಹಿಸಿ, ಪ್ರಕರಣಗಳನ್ನು ಎದುರಿಸುತ್ತಿರುವ ಎಲ್ಲಾ ಕನ್ನಡ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ಕನ್ನಡ ರಾಜ್ಯೋತ್ಸವದ ಒಳಗೆ ಅಧಿಕೃತವಾಗಿ ವಾಪಸ್ ಪಡೆಯಬೇಕು ಎಂದು ಕನ್ನಡ ಕ್ರಾಂತಿದಳದ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, “ಕನ್ನಡದ ಅಸ್ಮಿತೆಯನ್ನು ಉಳಿಸಲು ಹೋರಾಡಿದ ಹೋರಾಟಗಾರರು ಇಂದು ನ್ಯಾಯಾಲಯ ಮತ್ತು ಪೊಲೀಸ್ ಠಾಣೆಗಳಿಗೆ ಅಲೆಯುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ. ಇವರು ಯಾವುದೇ ವೈಯಕ್ತಿಕ ಸ್ವಾರ್ಥಕ್ಕಾಗಿ ಹೋರಾಡಿದವರಲ್ಲ; ತಾಯಿ ಭುವನೇಶ್ವರಿಯ ಸೇವೆಗಾಗಿ ಮತ್ತು ಕನ್ನಡಿಗರ ಹಿತರಕ್ಷಣೆಗಾಗಿ ಬೀದಿಗಿಳಿದವರು. ಇಂತಹ ಹೋರಾಟಗಾರರನ್ನು ಅಪರಾಧಿಗಳ ಸ್ಥಾನದಲ್ಲಿ ನಿಲ್ಲಿಸುವುದು ನಾಡಿಗೆ ಗೌರವ ತರುವಂಥದ್ದಲ್ಲ ಎಂದು ವಿಷಾದಿಸಿದ್ದಾರೆ.
ಬರುವ ನವೆಂಬರ್ ತಿಂಗಳಲ್ಲಿ ಇಡೀ ರಾಜ್ಯವೇ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿರುತ್ತದೆ. ಈ ಸಂಭ್ರಮಕ್ಕೆ ಮತ್ತಷ್ಟು ಅರ್ಥ ಬರಬೇಕಾದರೆ, ಸರ್ಕಾರವು ಹೋರಾಟಗಾರರ ಮೇಲಿನ ಎಲ್ಲಾ ಪ್ರಕರಣಗಳನ್ನು ಅಧಿಕೃತವಾಗಿ ಹಿಂಪಡೆಯುವ ಮೂಲಕ ಅವರಿಗೆ ದೊಡ್ಡ ಉಡುಗೊರೆ ನೀಡಬೇಕು. ಮುಖ್ಯಮಂತ್ರಿಗಳು ಈ ಕೂಡಲೇ ಗೃಹ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ರಾಜ್ಯೋತ್ಸವದ ದಿನದಂದೇ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಬೇಕು. ಒಂದು ವೇಳೆ ಸರ್ಕಾರ ವಿಳಂಬ ಧೋರಣೆ ಅನುಸರಿಸಿದರೆ, ಕನ್ನಡ ಕ್ರಾಂತಿದಳವು ಹೋರಾಟಗಾರರ ನ್ಯಾಯಕ್ಕಾಗಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಅವರು ಸರ್ಕಾರವನ್ನು ಎಚ್ಚರಿಸಿದ್ದಾರೆ.
