ಹಾಸನ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಸ್ಟಿಂಗ್ ಮಾಡಿದ್ದ ಆರೋಪಿ ನಾನೇ ಸ್ಟಿಂಗ್ ಮಾಡಿದ್ದು ಎಂದು ಸತ್ಯ ಒಪ್ಪಿಕೊಂಡ ಮೇಲೂ ಸಿಎಂ ಮತ್ತು ಗೃಹ ಸಚಿವ ಪ್ರಕರಣವನ್ನು ನನ್ನ ಕಡೆಗೆ ತಿರುಗಿಸಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ಮಾಧ್ಯಮಗಳ ಜತೆ ಮಾತನಾಡಿದ ಅವರು,
ಪತ್ರಕರ್ತ, ಕಾಂಗ್ರೆಸ್ ನಾಯಕಿ ಅವರ ಸಹಚರರು ಸ್ಟಿಂಗ್ ನಡೆಸಿದ್ದಾರೆ ಎಂಬುದು ಎಲ್ಲರೂ ಬಲ್ಲ ಸಂಗತಿ. ಅಲ್ಲದೆ, ಇವರಿಬ್ಬರ ಹೆಸರನ್ನು ಸ್ವತಃ ಸಿದ್ದರಾಮಯ್ಯ ಅವರು, ಅವರ ಪುತ್ರ ಯತೀಂದ್ರ ಸಹ ಹೇಳಿದ್ದಾರೆ. ಹೀಗಿದ್ದರೂ ಮುಖ್ಯಮಂತ್ರಿ, ಗೃಹ ಮಂತ್ರಿ ಇಬ್ಬರೂ ಸೇರಿ ಇಡೀ ವಿಷಯವನ್ನು ನಮ್ಮತ್ತ ತಿರುಗಿಸಲು ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ನಾವು ಹೆದರುವುದಿಲ್ಲ, ಎದುರಿಸುವ ಶಕ್ತಿ ನಮ್ಮ ಪಕ್ಷಕ್ಕಿದೆ ಎಂದು ಹೇಳಿದರು.
ರಾಜ್ಯದಲ್ಲಿ ಸ್ಟಿಂಗ್ ವಿಷಯವನ್ನು ಮೊದಲು ಪ್ರಸ್ತಾಪ ಮಾಡಿದವರೇ ಹಾಲಿ ಮುಖ್ಯಮಂತ್ರಿ. ಅದಾದ ಮೇಲೆ ಮಾಜಿ ಸಿಎಂ ವಿರುಧ್ದ ಸ್ಟಿಂಗ್ ನಡೆದಿದೆ ಎನ್ನುವ ಮಾಹಿತಿ ಹೊರಗೆ ಬಂತು. ಅಂದಿನಿಂದಲೇ ಈ ಗೃಹ ಸಚಿವ, ಮುಖ್ಯಮಂತ್ರಿ ಇಬ್ಬರೂ ಸೇರಿ ಜೆಡಿಎಸ್ ತಲೆಗೆ ಕಟ್ಟಲು ಕಸರತ್ತು ನಡೆಸುತ್ತಿದ್ದಾರೆ ಎಂದು ದೂರಿದರು.
ಮೊದಲ ದಿನದಿಂದಲೇ ಗೃಹ ಸಚಿವರು ನಮ್ಮ ಪಕ್ಷದ ವಾರ್ ರೂಂನಲ್ಲಿ, ಸೋಶಿಯಲ್ ಮೀಡಿಯಾ ವಿಭಾಗದಲ್ಲಿ ಕೆಲಸ ಮಾಡುವ ಯುವಕರ ಕುಟುಂಬಗಳನ್ನು ಟಾರ್ಗೆಟ್ ಮಾಡಿ ಸರ್ಚ್ ವಾರೆಂಟ್ ಕೊಡಿಸಿದ್ದಾರೆ. ಅವರೆಲ್ಲರೂ ಅಪರಾಧ ಎಸಗಿದ್ದಾರೆ ಎನ್ನುವ ರೀತಿಯಲ್ಲಿ ಆಪಾದನೆ ಮಾಡುತ್ತಿದ್ದಾರೆ. ಸರಕಾರ ಹೇಳಿದಂತೆ ಕೆಲಸ ಮಾಡುವ ಪೊಲೀಸರನ್ನು ಬಿಟ್ಟು ಈ ಕೆಲಸ ಮಾಡಿಸುತ್ತಿದ್ದಾರೆ ಎಂದು ತಿಳಿಸಿದರು.
ಯಾವ ವ್ಯಕ್ತಿ ಕಾಂಗ್ರೆಸ್ ಕಾರ್ಯಕರ್ತರ ಜೊತೆಗೂಡಿ 2023ರಲ್ಲಿ ಸ್ಟಿಂಗ್ ಆಪರೇಷನ್ ಏತಕ್ಕೆ ಮಾಡಿದ,ಆತನನ್ನು ರಕ್ಷಿಸಲು ಸರ್ಕಾರವೇ ಸಂಪೂರ್ಣ ಸಹಕಾರ ಕೊಡುತ್ತಿದೆ. ಆತನ ನಿರೀಕ್ಷಣಾ ಜಾಮೀನು ಅರ್ಜಿಗೆ ಸರ್ಕಾರದ ಕಡೆಯಿಂದ ಆಕ್ಷೇಪಣೆಯನ್ನು ಸಲ್ಲಿಸುವುದಿಲ್ಲ ಎಂದರೆ ಈ ಸರಕಾರ ಹೇಗೆ ತನಿಖೆ ನಡೆಸುತ್ತಿದೆ ಎಂಬುದು ಅರ್ಥವಾಗುತ್ತದೆ. ಪತ್ರಕರ್ತ, ಕಾಂಗ್ರೆಸ್ ನಾಯಕಿ ಯಾಕೆ ಸ್ಟಿಂಗ್ ಮಾಡಿದರು ಯಾರನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಲು ಕುತಂತ್ರ ರೂಪಿಸಿದ್ದರು ಎಂಬುದರ ಬಗ್ಗೆ ಗೃಹ ಸಚಿವರು ಹೇಳಬೇಕು ಎಂದು ಕೇಂದ್ರ ಸಚಿವರು ಒತ್ತಾಯಿಸಿದರು.
ಸಿದ್ದರಾಮಯ್ಯ ಅವರನ್ನು ಹೇಗಾದರೂ ಅಧಿಕಾರದಿಂದ ಕೆಳಕ್ಕೆ ಇಳಿಸಬೇಕು ಎಂಬ ದುರುದ್ದೇಶದಿಂದ ಸ್ಟಿಂಗ್ ಅನ್ನು ಗುರಾಣಿಯಾಗಿ ಬಳಸಿಕೊಂಡರು. ಈ ವಿಷಯ ಹಾಲಿ ಮುಖ್ಯಮಂತ್ರಿಗೆ ಸಂಪೂರ್ಣವಾಗಿ ಗೊತ್ತಿದೆ. ಕಾಂಗ್ರೆಸ್ ಪಕ್ಷದ ಹಲವಾರು ನಾಯಕರಿಗೂ ಗೊತ್ತಿದೆ. ಅದನ್ನೆಲ್ಲಾ ಮುಚ್ಚಿಟ್ಟು ನಮ್ಮನ್ನು ಬ್ಲಾಕ್ಮೇಲ್ ಮಾಡಲು ಹೊರಟಿದ್ದಾರೆ ಹೆಚ್ ಡಿ ಕೆ ಆರೋಪಿಸಿದರು.
ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ವಿಕ್ಕಿ ಎಂಬ ಉದ್ಯೋಗಿಯ ಅನುಮಾನಾಸ್ಪದ ಸಾವಿನ ಬಗ್ಗೆ ಪ್ರಸ್ತಾಪಿಸಿದ ಕುಮಾರಸ್ವಾಮಿ ಅವರು; ನಡೆದಿರುವ ಘಟನೆ ಅದು. ಅದನ್ನು ಯಾಕೆ ಮುಚ್ಚಿ ಹಾಕಿದರು ಯುಡಿಆರ್ ಏಕೆ ಮಾಡಿದರು ತನಿಖೆ ಏಕೆ ಮಾಡಲಿಲ್ಲ ಮರಣೋತ್ತರ ಪರೀಕ್ಷೆ ಯಾಕೆ ಮಾಡಲಿಲ್ಲ ಅಸಹಜ ಸಾವಾಗಿದ್ದರೆ ಏಕೆ ಮರಣೋತ್ತರ ಪರೀಕ್ಷೆ ಮಾಡಲಿಲ್ಲ ಎಂದು ಕುಮಾರಸ್ವಾಮಿ ಪ್ರಶ್ನೆಗಳ ಸುರಿಮಳೆ ಗೈದರು
