ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಪ್ರಯುಕ್ತ ಬೆಳಗ್ಗೆ 4 ಗಂಟೆಯಿಂದಲೇ ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ನೆರವೇರಿತು.
ಬೆಳಗ್ಗೆ 4 ಗಂಟೆಗೆ ದೇವಸ್ಥಾನದ ಬಾಗಿಲು ತೆರೆದು ಅಭಿಷೇಕ, ಚಂಡಿ ಹೋಮ, ಕುಂಕುಮಾರ್ಚನೆ, ಸಹಸ್ರನಾಮ ಅರ್ಚನೆ ನೆರವೇರಿತು. ಬೆಳಗ್ಗೆ 6:30 ಕ್ಕೆ ಮಹಾ ಮಂಗಳಾರತಿ ನೆರವೇರಿದ ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಪೂಜೆಯ ನಂತರ ಬೆಳಗ್ಗೆ 7.15 ಗಂಟೆಗೆ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯು ಚಾಮುಂಡಿ ಬೆಟ್ಟದಿಂದ ಮೈಸೂರು ಅರಮನೆಗೆ ಭವ್ಯ ಮೆರವಣಿಗೆಯಲ್ಲಿ ಹೊರಟಿತು
ಬೆಳಗ್ಗೆ 7 ಗಂಟೆಯಿಂದಲೇ ಚಾಮುಂಡಿ ಬೆಟ್ಟದಿಂದ ಅರಮನೆವರೆಗಿನ ರಸ್ತೆಯ ಎರಡೂ ಬದಿಯಲ್ಲಿ ಜನಸಾಗರ ಸೇರಿತ್ತು. ತಾಯಿಯ ದರ್ಶನ ಪಡೆಯಲು ಚಿಕ್ಕ ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಸಾವಿರಾರು ಜನ ಮುಂಜಾನೆಯಿಂದಲೇ ಕಾದು ಕುಳಿತಿದ್ದರು.
ಜೈ ಚಾಮುಂಡಿ ತಾಯಿ ಎಂಬ ಜಯಘೋಷದೊಂದಿಗೆ ಭಕ್ತರು ಹೂ, ಕುಂಕುಮ ಎರಚಿ ದೇವಿಯನ್ನು ಸ್ವಾಗತಿಸಿದರು.
ಭಕ್ತರ ಸುರಕ್ಷತೆಗಾಗಿ ಬೆಳಗ್ಗೆ 7 ಗಂಟೆಯಿಂದಲೇ 200 ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ಚಾಮುಂಡಿ ಬೆಟ್ಟದ ತಪ್ಪಲಿನಿಂದ ಅರಮನೆವರೆಗೆ ಬ್ಯಾರಿಕೇಡ್ ಅಳವಡಿಸಿ, ಸಂಚಾರ ಮಾರ್ಗ ಬದಲಾವಣೆ ಮಾಡಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುಂಜಾಗ್ರತಾ ಕ್ರಮ ವಹಿಸಿದ್ದರು.
ಅರಮನೆ ತಲುಪಿದ ನಂತರ ದೇವಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಸಂಜೆ 4:10 ಕ್ಕೆ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಿ ಐತಿಹಾಸಿಕ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
