ಚಾಮರಾಜನಗರ: ಚಾಮರಾಜನಗರ ದಸರಾ ಮಹೋತ್ಸವದ ಅಂಗವಾಗಿ ನಗರದ ಜಿಲ್ಲಾಡಳಿತ ಭವನದಿಂದ ಚಾಮರಾಜೇಶ್ವರ ದೇವಸ್ಥಾನದವರೆಗೆ ಆಯೋಜಿಸಿದ್ದ ಮೆರವಣಿಗೆಯು ವಿವಿಧ ಆಕರ್ಷಕ ಸಾಂಸ್ಕೃತಿಕ ಕಲಾಪ್ರಕಾರದ ತಂಡಗಳು ಜನಮನ ಸೂರೆಗೊಂಡವು
ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿಂದು ಚಾಮರಾಜನಗರ ದಸರಾ ಮಹೋತ್ಸವ ಪ್ರಯುಕ್ತ ಮೊದಲು ನಂದಿಧ್ವಜ ಕಂಬಕ್ಕೆ ಪೂಜೆ ಸಲ್ಲಿಸಿ ಬಳಿಕ ಬೆಳ್ಳಿರಥದಲ್ಲಿ ಅಲಂಕೃತಗೊಂಡ ನಾಡದೇವಿ ಶ್ರೀ ಚಾಮುಂಡೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅದ್ದೂರಿ ಮೆರವಣಿಗೆಗೆ ಚಾಲನೆ ನೀಡಿದರು.
ನಾದಸ್ವರ, ಡೊಳ್ಳುಕುಣಿತ, ವೀರಗಾಸೆ, ಚಂಡೆವಾದ್ಯ, ಮರಗಾಲು ಕುಣಿತ, ಸತ್ತಿಗೆ, ಸೂರಪಾನಿ, ಮಂಟೇಸ್ವಾಮಿಯವರ ಕಂಡಾಯ, ಗೊಂಬೆ ಕುಣಿತ, ದೊಣ್ಣೆ ವರಸೆ, ಕರಡಿ ಕುಣಿತ, ಗೊರವರr ಕುಣಿತ, ಚಾಮುಂಡೇಶ್ವರಿ ದೇವಿ, ಗಣೇಶ, ಆಂಜನೇಯ, ಈಶ್ವರ, ಪಾರ್ವತಿ ವೇಷಧಾರಿಗಳು, ಯಕ್ಷಗಾನ, ಕೊಡವರ ನೃತ್ಯ ಸೇರಿದಂತೆ ವಿವಿಧ ಜಿಲ್ಲೆಗಳ ಸಾಂಪ್ರಾದಾಯಿಕ ನೃತ್ಯದೊಂದಿಗೆ ಸಾಗಿದ ಮೆರವಣಿಗೆಯು ಕಲಾವೈಭಕ್ಕೆ ಮೆರುಗು ತುಂಬಿ ಜನಾಕರ್ಷಣೆಗೆ ಸಾಕ್ಷಿಯಾಯಿತು. ದಾರಿಯುದ್ದಕ್ಕೂ ಮೆರವಣಿಗೆ ನೋಡಲು ಕಿಕ್ಕಿರಿದು ಸೇರಿದ್ದ ಜನರ ಸಂಭ್ರಮ ಇಮ್ಮಡಿಸಿತ್ತು.
ಮೆರವಣಿಗೆಯಲ್ಲಿ ಕಲಾತಂಡಗಳೊಂದಿಗೆ ಕೃಷಿ, ರೇಷ್ಮೆ, ಮೀನುಗಾರಿಕೆ, ಅರಣ್ಯ, ಆರೋಗ್ಯ, ಯುವ ಸಬಲೀಕರಣ ಮತ್ತು ಕ್ರೀಡೆ, ಶಕ್ತಿ ಯೋಜನೆ, ಪಂಚ ಗ್ಯಾರಂಟಿ ಯೋಜನೆಗಳು ಸೇರಿದಂತೆ ವಿವಿಧ ಸರ್ಕಾರಿ ಅಭಿವೃದ್ಧಿ ಯೋಜನೆ, ಕಾರ್ಯಕ್ರಮ ಅನುಷ್ಟಾನಗೊಳಿಸುವ ಕುರಿತು ಜನಜಾಗೃತಿ ಮೂಡಿಸುವ ಆಕರ್ಷಕ ಸ್ತಬ್ದಚಿತ್ರಗಳು ಜನರ ಮನಸ್ಸನ್ನು ಸೂರೆಗೊಂಡು ಮೆರವಣಿಗೆ ಸಂಪನ್ನಗೊಂಡಿತು.
ಸಚಿವರೊಂದಿಗೆ ಚುಡಾ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನಾ, ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ವಿ. ಪ್ರಿಯದರ್ಶಿನಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶೃತಿ. ಡಿ.ಸಿ, ತಹಶೀಲ್ದಾರ್ ಗಿರಿಜಾ, ಮತ್ತಿತರ ಅಧಿಕಾರಿಗಳು ಹಾಜರಿದ್ದರು.
