ಮೈಸೂರು: ದಸರಾ ಉದ್ಘಾಟಿಸುವಷ್ಟು ದೊಡ್ಡ ವ್ಯಕ್ತಿ ನಾನಲ್ಲ ಎಂದು
ದಸರಾ 2026 ಉದ್ಘಾಟನಾ ವೇದಿಕೆಯಲ್ಲಿ ಕೊಪ್ಪಳದ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಭಾವುಕರಾಗಿ ಮಾತನಾಡಿದರು.
ಸುತ್ತೂರು ಶ್ರೀಗಳಿಗೆ ವಂದನೆ ಸಲ್ಲಿಸಿ ಮಾತು ಆರಂಭಿಸಿದ ಶ್ರೀಗಳು, ಕೊಪ್ಪಳದ ಗಂಡುಗಲಿ ಕುಮಾರರಾಮನ ನೆಲದಿಂದ ದಸರಾ ಆರಂಭವಾಯಿತು ಎಂದು ಸ್ಮರಿಸಿದರು.
ತುಂಗಭದ್ರಾ ತೀರದಿಂದ ಕಾವೇರಿ ತೀರಕ್ಕೆ ದಸರಾ ಹರಿದು ಬಂದಿದೆ. ಒಂದು ಕಾಲದಲ್ಲಿ ದೊರೆಯ ಹಬ್ಬವಾಗಿದ್ದ ದಸರಾ ಇಂದು ಧರೆಯ ಹಬ್ಬವಾಗಿದೆ ಎಂದು ಅವರು ಬಣ್ಣಿಸಿದರು.
ದಸರಾ ಉದ್ಘಾಟಿಸುವಷ್ಟು ದೊಡ್ಡ ವ್ಯಕ್ತಿ ನಾನಲ್ಲ ಎಂದು ವಿನಮ್ರವಾಗಿ ಹೇಳಿದ ಶ್ರೀಗಳು, ನಾನು ದಸರಾ ಉದ್ಘಾಟನೆಗೆ ಬಂದಿಲ್ಲ. ಹಿಂದೆ ಈ ದಸರಾವನ್ನು ಉದ್ಘಾಟಿಸಿದ ಜ್ಞಾನಿಗಳು ಹಚ್ಚಿದ ಪ್ರಾರ್ಥನೆಯ ದೀಪ ಆ ದೀಪ ಆರದಿರಲಿ ಎಂದು ಚಾಮುಂಡಿ ದೇವಿಯ ಬಳಿ ಪ್ರಾರ್ಥಿಸಲು ಬಂದಿದ್ದೇನೆ ಎಂದು ಹೇಳಿದರು.
ನಾನು ನಾಡಿಗಾಗಿ ಪ್ರಾರ್ಥನೆ ಸಲ್ಲಿಸಲು ಬಂದಿದ್ದೇನೆ. ನಾನು ಜೋಳಿಗೆ ಜಂಗಮ ಅಷ್ಟೆ. ನನ್ನಿಂದ ಪ್ರಾರ್ಥನೆ ಮಾತ್ರ ಸಾಧ್ಯ. ಚಾಮುಂಡಿ ತಾಯಿ ಶಕ್ತಿ ದೇವತೆ. ಅದಕ್ಕಾಗಿ ಇಲ್ಲಿಗೆ ಪ್ರಾರ್ಥನೆಗೆ ಬಂದಿದ್ದೇನೆ ಎಂದು ಶ್ರೀಗಳು ನುಡಿದರು.
ಶ್ರೀಗಳ ಈ ಮಾತಿಗೆ ಜನರಿಂದ ಭಾರೀ ಕರತಾಡನ ಮೊಳಗಿತು.
