ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026 ಕ್ಕೆ ನಾಡಿನ ಅದಿ ದೇವತೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಅಧಿಕೃತವಾಗಿ ಚಾಲನೆ ದೊರೆ ಯಿತು.
ಇಂದಿನಿಂದದ 11 ದಿನಗಳ ಕಾಲ ನಡೆಯುವ ವೈಭವದ ದಸರಾ ಮಹೋತ್ಸವಕ್ಕೆ ಮೈಸೂರಲ್ಲಿ ಸಾಂಪ್ರದಾಯಿಕವಾಗಿ ಚಾಲನೆ ದೊರೆತಿದೆ.
ವಿಜೃಂಭಣೆಯ ದಸರಾ ಉತ್ಸವವನ್ನು ಕೊಪ್ಪಳದ ಗವಿಮಠದ ಪೀಠಾಧಿಪತಿ ಪರಮಪೂಜ್ಯ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಉದ್ಘಾಟಿಸಿದರು.
ಮೊದಲಿಗೆ ಶ್ರೀಗಳನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು.
ನಂತರ ದೇವಾಲಯಕ್ಕೆ ಆಗಮಿಸಿದ ಶ್ರೀಗಳು ನಾಡ ಅದಿದೇವತೆ ಚಾಮುಂಡೇಶ್ವರಿಗೆ ನಮಸ್ಕರಿಸಿದರು.
ಆನಂತರ ವೇದಿಕೆಯಲ್ಲಿ ಇಡಲಾಗಿದ್ದ
ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪುಷ್ಪನಮನ ಸಲ್ಲಿಸುವ ಮೂಲಕ ನವರಾತ್ರಿಗೆ ಚಾಲನೆ ನೀಡಿದರು.
ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಬಳಿ ನಿರ್ಮಿಸಿರುವ ವಿಶೇಷ ವೇದಿಕೆಯಲ್ಲಿ ಬೆಳಿಗ್ಗೆ 11.50 ರಿಂದ 12.13 ರ ಧನುರ್ ಲಗ್ನದ ಶುಭ ಮುಹೂರ್ತದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಡಿಸಿಎಂ ಜಿ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಸಂಪುಟದ ಸಚಿವರು ಭಾಗವಹಿಸಿದ್ದರು.
ಉದ್ಘಾಟನೆಗೂ ಮುನ್ನ ವಿವಿಧ ಜಾನಪದ ಕಲಾತಂಡಗಳಿಂದ ನೃತ್ಯ ಪ್ರದರ್ಶನ ನಡೆಯಿತು. ಮಹಿಷಾಸುರನ ಪ್ರತಿಮೆಯಿಂದ ವೇದಿಕೆಯವರೆಗೂ ವಿವಿಧ ಮಾದರಿಯ ಸುಂದರವಾದ ರಂಗೋಲಿಯನ್ನು ಬಿಡಿಸಿದ್ದು ಆಕರ್ಶಕವಾಗಿತ್ತು.
