ಮೈಸೂರು: ದಯವಿಟ್ಟು ರಿಂಗ್ ರೋಡ್ ನಲ್ಲಿ ಕಸ ಹಾಕಿ ನಗರದ ಹೊರ ವಲಯ ಸೌಂದರ್ಯ ಹಾಳು ಮಾಡಬೇಡಿ ಎಂದು ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಮಹಾನಗರ ಪಾಲಿಕೆ ಆಯುಕ್ತರಾದ ಸವಿತಾ ಎಂ.ಕೆ. ಮತ್ತು ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಾದ
ರೂಪ ಬಿ ಆರ್ ಅವರ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಾಚರಣೆ ನಡೆಯುತ್ತಿದೆ.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ–2026ರ ಹಿನ್ನೆಲೆಯಲ್ಲಿ ಮೈಸೂರು ನಗರವನ್ನು ಸ್ವಚ್ಛ, ಸುಂದರ ಹಾಗೂ ಪ್ರವಾಸಿಗರ ಸ್ನೇಹಿ ನಗರವನ್ನಾಗಿಸುವ ಉದ್ದೇಶದಿಂದ ಮೈಸೂರು ಮಹಾನಗರ ಪಾಲಿಕೆ ಹಾಗೂ ಸುತ್ತಮುತ್ತಲಿನ ನಗರ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ವರ್ತುಲ ರಸ್ತೆಯಾದ್ಯಂತ ಬೃಹತ್ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವರು ದಸರಾ ಮಹೋತ್ಸವದ ಪೂರ್ವಸಿದ್ಧತೆಗಳ ಪರಿಶೀಲನೆ ಸಂದರ್ಭದಲ್ಲಿ ನೀಡಿದ ನಿರ್ದೇಶನಗಳನ್ವಯ, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಸವಿತಾ ಎಂ.ಕೆ. ಅವರ ನೇತೃತ್ವದಲ್ಲಿ ಬೆಳಿಗ್ಗೆ 6.30 ಗಂಟೆಯಿಂದ ವರ್ತುಲ ರಸ್ತೆಯ ವಿವಿಧ ಭಾಗಗಳಲ್ಲಿ ಸ್ವಚ್ಛತಾ ಕಾರ್ಯಾಚರಣೆ ಕೈಗೊಳ್ಳಲಾಯಿತು.
ಈ ಅಭಿಯಾನದಲ್ಲಿ ಸಿಂಧು ಅಧೀಕ್ಷಕ ಅಭಿಯಂತರರು, ನರಸಿಂಹ ಮೂರ್ತಿ, ಆಯುಕ್ತರು, ಹೂಟಗಳ್ಳಿ ನಗರ ಸಭೆ, ಮೃತ್ಯಂಜಯ ಕಾರ್ಯಪಾಲಕ ಅಭಿಯಂತರರು ಹಾಗೂ ಮೈಸೂರು ಮಹಾನಗರ ಪಾಲಿಕೆಯ ಎಲ್ಲಾ ವಲಯ ಆಯುಕ್ತರು, ಅಭಿವೃದ್ಧಿ ಅಧಿಕಾರಿಗಳು,ಸುತ್ತಮುತ್ತಲಿನ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಸಕ್ರಿಯವಾಗಿ ಭಾಗವಹಿಸಿ, ವರ್ತುಲ ರಸ್ತೆಯ ಬದಿಗಳಲ್ಲಿ ಸಂಗ್ರಹವಾಗಿದ್ದ ಕಸ, ಪ್ಲಾಸ್ಟಿಕ್ ತ್ಯಾಜ್ಯ, ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯ ಹಾಗೂ ಇತರೆ ಅನುಪಯುಕ್ತ ವಸ್ತುಗಳನ್ನು ತೆರವುಗೊಳಿಸಿದರು.
ಸ್ವಚ್ಛತಾ ಕಾರ್ಯಾಚರಣೆಯ ಸಂದರ್ಭದಲ್ಲಿ ಆಯುಕ್ತರಾದ ಸವಿತಾ ಎಂ.ಕೆ. ಅವರು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಸ್ವಚ್ಛತಾ ಕಾರ್ಯಗಳ ಪರಿಶೀಲನೆ ನಡೆಸಿದರು. ವರ್ತುಲ ರಸ್ತೆಯ ಬದಿಗಳಲ್ಲಿ ಅನಧಿಕೃತವಾಗಿ ತ್ಯಾಜ್ಯ ಸುರಿಯುವುದನ್ನು ತಡೆಗಟ್ಟಲು, ಸ್ವಚ್ಛತೆಯನ್ನು ನಿರಂತರವಾಗಿ ಕಾಪಾಡಲು ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ರೂಪ ಬಿ.ಆರ್., ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೃಷ್ಣ, ಅಧೀಕ್ಷಕ ಅಭಿಯಂತರರಾದ ಸಿಂಧು, ಹೂಟಗಳ್ಳಿ ನಗರಸಭೆಯ ಆಯುಕ್ತರಾದ ನರಸಿಂಹಮೂರ್ತಿ, ಮೈಸೂರು ಮಹಾನಗರ ಪಾಲಿಕೆಯ ಕಾರ್ಯಪಾಲಕ ಅಭಿಯಂತರರಾದ (ಪರಿಸರ) ಮೃತ್ಯುಂಜಯ ಕೆ.ಎಸ್., ವಲಯ–5ರ ಸಹಾಯಕ ಆಯುಕ್ತರಾದ ಮಂಜುನಾಥ ರೆಡ್ಡಿ, ವಲಯ–8ರ ಸಹಾಯಕ ಆಯುಕ್ತರಾದ ಸೋಮಶೇಖರ್, ಸುತ್ತಮುತ್ತಲಿನ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಪರಿಸರ ಅಭಿಯಂತರರು, ಆರೋಗ್ಯ ನಿರೀಕ್ಷಕರು, ಮೇಲ್ವಿಚಾರಕರು ಹಾಗೂ ಪೌರಕಾರ್ಮಿಕರು ಭಾಗವಹಿಸಿದ್ದರು.
ದಸರಾ ಮಹೋತ್ಸವಕ್ಕೆ ಆಗಮಿಸುವ ಲಕ್ಷಾಂತರ ಪ್ರವಾಸಿಗರನ್ನು ಸ್ವಚ್ಛ ಹಾಗೂ ಸುಂದರ ಮೈಸೂರು ನಗರದಲ್ಲಿ ಸ್ವಾಗತಿಸಲು ಮಹಾನಗರ ಪಾಲಿಕೆ ಸಜ್ಜಾಗಿದ್ದು, ನಗರದ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಲ್ಲಿ ಸಾರ್ವಜನಿಕರು ಸಹಕರಿಸಬೇಕು ಹಾಗೂ ರಸ್ತೆ ಬದಿಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯವನ್ನು ಸುರಿಯಬಾರದು ಎಂದು ಮೈಸೂರು ಮಹಾನಗರ ಪಾಲಿಕೆ ಮನವಿ ಮಾಡಿದೆ.
