ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಅಕ್ಟೋಬರ್ 11 ರಂದು ನಡೆಯಲಿರುವ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ಕಾರ್ಯಕ್ರಮದ ದಿನ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆವರೆಗೆ ದೇವಸ್ಥಾನಕ್ಕೆ ಸಾರ್ವಜನಿಕರಿಗೆ ನಿರ್ಬಂಧ ಹೇರಲು ಹೊರಟಿರುವುದನ್ನು ಖಂಡಿಸಿ ಕರ್ನಾಟಕ ಸೇನಾಪಡೆಯವರು ಪ್ರತಿಭಟನೆ ನಡೆಸಿದರು.
ಮೈಸೂರಿನ ಹಳೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ,ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.
ಚಾಮುಂಡಿ ಬೆಟ್ಟದಲ್ಲಿ ಕೇಂದ್ರ ಸರ್ಕಾರದ ಪ್ರಸಾದ ಯೋಜನೆ ಅಡಿ ನಿರ್ಮಾಣ ಮಾಡುತ್ತಿದ್ದ ಕ್ಯೂ ಮಂಟಪದ ಸ್ಥಳದಲ್ಲೇ, ಈಗ ದಸರಾ ಉದ್ಘಾಟನೆಗೆ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಅಂದರೆ ಪ್ರಸಾದ ಯೋಜನೆಗೆ ಖರ್ಚು ಮಾಡಿದ್ದ ಕೋಟ್ಯಾಂತರ ರೂ ಹಣ ವ್ಯರ್ಥವಾಗಿದೆ. ಇದನ್ನು ಅಧಿಕಾರಿಗಳು ನುಂಗಿ ನೀರು ಕುಡಿದಿದ್ದಾರೆ. ಮೊದಲೇ ಟಾರ್ ಇದ್ದ ನೆಲವನ್ನು ಸುಮ್ಮನೆ ಅಗೆದು, ಟೈಲ್ಸ್ ಹಾಕಿ, ಪಿಲ್ಲರ್ ಹಾಕಿ, ದುಂದು ವೆಚ್ಚ ಮಾಡಿ ಸಾರ್ವಜನಿಕರ ಹಣವನ್ನು ದುರುಪಯೋಗ ಮಾಡಿದ್ದಾರೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಉಸ್ತುವಾರಿ ಸಚಿವರು ಅಕ್ಟೋಬರ್ 11ರಂದು ಚಾಮುಂಡಿ ಬೆಟ್ಟಕ್ಕೆ ಬರೀ ಗಣ್ಯರಿಗೆ ಅವಕಾಶ ಎಂದು ಹೇಳಿರುವುದು ಹಾಗೂ ಅಂದು ಗಣ್ಯರು ಚಾಮುಂಡಿ ಬೆಟ್ಟಕ್ಕೆ ಬರಬೇಕಾದರೆ ಜಿಲ್ಲಾಡಳಿತದ ಪೂರ್ವ ಅನುಮತಿ ಪಡೆಯುವುದು ಕಡ್ಡಾಯ ಎಂದಿರುವುದು, ಅತ್ಯಂತ ಖಂಡನೀಯ. ದಸರಾ ಸಾರ್ವಜನಿಕರ ದಸರಾ ಆಗಬೇಕೆ ವಿನಹ ರಾಜಕಾರಣಿಗಳ ದಸರಾ ಆಗಬಾರದು. ಪ್ರತಿ ವರ್ಷ ಸಾರ್ವಜನಿಕರಿಗೆ ಉದ್ಘಾಟನೆ ದಿನ ಬೆಟ್ಟಕ್ಕೆ ಅವಕಾಶ ಇತ್ತು,
ಆದರೆ ಈಗ ಅನುಭವವಿಲ್ಲದ ಉಸ್ತುವಾರಿ ಸಚಿವರು, ಏನೇನೋ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಹಾಸ್ಯಸ್ಪದ ಎಂದು ಈ ವೇಳೆ ಜಿಲ್ಲಾ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಟೀಕಿಸಿದರು.
ನಾಡದೇವತೆ ಚಾಮುಂಡೇಶ್ವರಿ ಬೆಟ್ಟಕ್ಕೆ, ದರ್ಶನಕ್ಕೆ ಸಾರ್ವಜನಿಕರಿಗೆ ಏಕೆ ನಿರ್ಬಂಧ ಮಾಡುತ್ತೀರಿ ನಿಮ್ಮ ವೇದಿಕೆ ಕಾರ್ಯಕ್ರಮ ಬರಿ ಗಣ್ಯರಿಗೆ ಅಂತಾದರೆ, ನೀವು ವಿಧಾನಸೌಧದಲ್ಲೇ ಮಾಡಿಕೊಳ್ಳಿ ಎಂದು ಯತೀಂದ್ರ ಅವರಿಗೆ ಹೇಳಿದರು.
ಚಾಮುಂಡಿ ಬೆಟ್ಟದಲ್ಲಿ ಭಕ್ತಾದಿಗಳಿಗೆ ಅವಕಾಶ ನೀಡದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ದೇಶದ ಮೂಲೆ ಮೂಲೆಗಳಿಂದ ಬರುವ ಭಕ್ತರಿಗೆ ಅಂದು ದರ್ಶನ ಸಿಗದಿದ್ದರೆ ಹೇಗೆ, ನಿಮ್ಮ ರಾಜಕೀಯವನ್ನು ವಿಧಾನ ಸೌಧದಲ್ಲೇ ಮಾಡಿಕೊಳ್ಳಿ, ನಾಡ ದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಅಲ್ಲ. ಇದಕ್ಕೆ ಮೈಸೂರಿನ ಜನತೆ ಹಾಗೂ ಕೋಟ್ಯಾಂತರ ಭಕ್ತಾದಿಗಳ ವಿರೋಧವಿದೆ ಎಂದು ಹೇಳಿದರು.
ಉಸ್ತುವಾರಿ ಸಚಿವರು ಕೂಡಲೇ ಈ ನಿರ್ಧಾರವನ್ನು ಹಿಂಪಡೆಯಬೇಕು ಹಾಗೂ ಅಂದು ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶ ನೀಡಬೇಕೆಂದು ತೇಜೇಶ್ ಲೋಕೇಶ್ ಗೌಡ
ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ಸೇನಾ ಪಡೆಯ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು. ಗೋಲ್ಡನ್ ಸುರೇಶ್, ಪ್ರಭುಶಂಕರ್, ಸಂತೋಷ್, ಪ್ರಜೀಶ್ , ಸಿಂದುವಳ್ಳಿ ಶಿವಕುಮಾರ್ , ಶಿವಲಿಂಗಯ್ಯ, ಕೇಬಲ್ ರಮೇಶ್, ಮಧುವನ ಚಂದ್ರು, ಸೋಮೇಗೌಡ, ಹೊನ್ನೇಗೌಡ, ಬಸವರಾಜು, ಶಾಂತಕುಮಾರ,ವಿಜಯೇಂದ್ರ, ಬೋಗಾದಿ ಸಿದ್ದೇಗೌಡ, ನಾಗರಾಜು, ದರ್ಶನ್ ಗೌಡ, ರಾಧಾಕೃಷ್ಣ, ಗಣೇಶ್ ಪ್ರಸಾದ್, ಪ್ರದೀಪ್ ಆರ್, ಆನಂದ್, ತ್ಯಾಗರಾಜ್, ನಾಗೇಶ್, ಕುಮಾರ್ ಗೌಡ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
