ಬೆಂಗಳೂರು: ಸುಪ್ರೀಂ ಕೋರ್ಟ್ ನ ನಕಲಿ ಆದೇಶವನ್ನು ಸೃಷ್ಟಿಸಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಯೊಬ್ಬನನ್ನು ಅಕ್ರಮವಾಗಿ ಬಿಡುಗಡೆ ಮಾಡಿದ ಕಾರಾಗೃಹ ಡಿಐಜಿ ಈಗ ಬಂಧನದಲ್ಲಿದ್ದಾರೆ.
ಪ್ರಸ್ತುತ ಕಲಬುರಗಿ ವಲಯದ ಜೈಲುಗಳ ಡಿಐಜಿ ಆಗಿರುವ ಸೋಮಶೇಖರ್ ಬಂಧಿತ ಆರೋಪಿ.
ಕೈದಿಯನ್ನು ಬಿಡುಗಡೆ ಮಾಡಿಸಿದ್ದಲ್ಲದೆ ಆತನ ಪತ್ನಿಯನ್ನು ಲೈಂಗಿಕವಾಗಿ ಶೋಷಣೆ ಮಾಡಿದ ಗಂಭೀರ ಆರೋಪದ ಮೇರೆಗೆ, ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಡಿಐಜಿ ಎಂ. ಸೋಮಶೇಖರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಸೋಮಶೇಖರ್, 2018ರಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾಗಿದ್ದಾಗ ಕೈದಿಯನ್ನು ಅಕ್ರಮವಾಗಿ ಬಿಡುಗಡೆ ಮಾಡಿದ್ದರು:
2004ರ ಹಣಕ್ಕಾಗಿ ಅಪಹರಣ ಪ್ರಕರಣವೊಂದರಲ್ಲಿ ಶಂಕರ್.ಎ ಎಂಬಾತನಿಗೆ ತ್ವರಿತಗತಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿತ್ತು.
ಈ ತೀರ್ಪನ್ನು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಕೂಡ ಎತ್ತಿಹಿಡಿದಿದ್ದವು. ಆದರೆ, ಈತನನ್ನು ಜೈಲಿನಿಂದ ಬಿಡಿಸುವ ಉದ್ದೇಶದಿಂದ ನವೆಂಬರ್ 2, 2018 ಎಂದು ದಿನಾಂಕ ನಮೂದಿಸಿ ಸುಪ್ರೀಂ ಕೋರ್ಟ್ನ ನಕಲಿ ಆದೇಶವೊಂದನ್ನು ಜೈಲಿನೊಳಗೇ ಸೃಷ್ಟಿಸಲಾಗಿತ್ತು.
ಈ ನಕಲಿ ದಾಖಲೆಯ ಆಧಾರದ ಮೇಲೆ ಅದೇ ವರ್ಷ ನವೆಂಬರ್ 13ರಂದು ಸೋಮಶೇಖರ್ ಕೈದಿಯ ಬಿಡುಗಡೆಗೆ ಅಧಿಕೃತ ಸಹಿ ಹಾಕಿದ್ದರು.
ಜೈಲಿನಲ್ಲಿ ಅಂದು ದ್ವಿತೀಯ ದರ್ಜೆ ಸಹಾಯಕರಾಗಿದ್ದ ಶ್ರೀಕಾಂತ್.ಎಸ್ ಎಂಬಾತ ಈ ನಕಲಿ ಆದೇಶವನ್ನು ಸೃಷ್ಟಿಸಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ..
ಕೈದಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡುವುದು, ನಕಲಿ ದಾಖಲೆ ಸೃಷ್ಟಿಸಿ ಬಿಡುಗಡೆ ಮಾಡುವುದು ಸೇರಿದಂತೆ ಹಲವು ಕಾನೂನುಬಾಹಿರ ಸೌಲಭ್ಯಗಳನ್ನು ಒದಗಿಸಲು ಅಂದಿನ ಮುಖ್ಯ ಅಧೀಕ್ಷಕ ಸೋಮಶೇಖರ್ ಅವರು ಕೈದಿಯ ಪತ್ನಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂಬ ವಿಚಾರವನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಹಿಂದೆ ಪೆರೋಲ್ ಮೇಲೆ ತೆರಳಿ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಕೈದಿ ಶಂಕರ್ನ ಕಡತದಲ್ಲಿ ಜೈಲು ಸಿಬ್ಬಂದಿ ‘ಪ್ರತಿಕೂಲ ಷರಾ ಬರೆದಿದ್ದಾರೆ.
ನಿಯಮಗಳ ಪ್ರಕಾರ ಆತನಿಗೆ ಮತ್ತೆ ಪೆರೋಲ್ ನೀಡುವಂತಿರಲಿಲ್ಲ. ಆದರೂ ನಿಯಮಗಳನ್ನು ಗಾಳಿಗೆ ತೂರಿ 2018ರಲ್ಲಿ ಮೂರು ಬಾರಿ ತಲಾ 15 ದಿನಗಳ ಪೆರೋಲ್ ಮಂಜೂರು ಮಾಡಲಾಗಿತ್ತು. ಇದಕ್ಕಾಗಿ ಚಂದ್ರಾಲೇಔಟ್ ಪೊಲೀಸ್ ಠಾಣೆಯ ಲ್ಯಾಂಡ್ಲೈನ್ ಸಂಖ್ಯೆ ಎಂದು ಬೇರೊಂದು ನಕಲಿ ದೂರವಾಣಿ ಸಂಖ್ಯೆಯನ್ನು ನೀಡಿ ಪೊಲೀಸ್ ಪರಿಶೀಲನಾ ಪ್ರಕ್ರಿಯೆಯಲ್ಲೂ ವಂಚನೆ ಎಸಗಲಾಗಿತ್ತು.
ಈ ಹಗರಣದ ಕುರಿತು 2026ರ ಮೇ 20ರಂದು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಸ್ತುತ ಜೈಲು ಉಸ್ತುವಾರಿ ಅಧೀಕ್ಷಕರು ಅಧಿಕೃತ ದೂರು ದಾಖಲಿಸಿದ್ದರು.
ಎಲೆಕ್ಟ್ರಾನಿಕ್ಸ್ ಸಿಟಿ ವಿಭಾಗದ ಡಿಸಿಪಿ ಎಂ. ನಾರಾಯಣ ಅವರ ನೇತೃತ್ವದ ವಿಶೇಷ ಪೊಲೀಸ್ ತಂಡವು ಈ ಬಗ್ಗೆ ತನಿಖೆ ಕೈಗೊಂಡಿತ್ತು. ತನಿಖೆಗೆ ಅಸಹಕಾರ ತೋರಿದ ಹಾಗೂ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟ ಹಿನ್ನೆಲೆಯಲ್ಲಿ ಅಕ್ಟೋಬರ್ 4ರಂದು ಸೋಮಶೇಖರ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಅಕ್ಟೋಬರ್ 9ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಈ ಹಗರಣದಲ್ಲಿ ಭಾಗಿಯಾಗಿದ್ದ ಕೈದಿ ಶಂಕರ್ ಮತ್ತು ನಕಲಿ ದಾಖಲೆ ಸೃಷ್ಟಿಸಿದ ಸಿಬ್ಬಂದಿ ಶ್ರೀಕಾಂತ್ ಅವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
