ಹೊಸದುರ್ಗ: ಕರ್ನಾಟಕದಲ್ಲಿರುವ ಲಕ್ಷಾಂತರ ಬುಡಕಟ್ಟು ಸಮುದಾಯದವರಿಗೆ ಸರ್ಕಾರದಿಂದ ಸೂಕ್ತ ಸೌಲಭ್ಯಗಳು ಹಾಗೂ ಸ್ಥಾನಮಾನಗಳು ದೊರೆಯುತ್ತಿಲ್ಲ ಎಂದು
ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರಾದ ಡಾ. ಜಾನಪದ ಎಸ್. ಬಾಲಾಜಿ ವಿಷಾದಿಸಿದರು.
ಬುಡಕಟ್ಟು ಸಮುದಾಯದವರ ಕಲೆ, ಸಂಸ್ಕೃತಿ ಮತ್ತು ಜೀವನ ಪದ್ಧತಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಸರ್ಕಾರವು ಬುಡಕಟ್ಟು ಸಮುದಾಯದವರಿಗೆ ಪ್ರತ್ಯೇಕ ಅಕಾಡೆಮಿಯನ್ನು ಸ್ಥಾಪಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ಹೊಸದುರ್ಗದ ಇಂದಿರಾ ಗಾಂಧಿ ಬಿ.ಎಡ್. ಕಾಲೇಜು ಆವರಣದಲ್ಲಿ ಕನ್ನಡ ಜಾನಪದ ಪರಿಷತ್ ಚಿತ್ರದುರ್ಗ ಜಿಲ್ಲಾ ಘಟಕ ಹಾಗೂ ನಿಜಲಿಂಗಪ್ಪ ಗ್ರಾಮೀಣ ಶಿಕ್ಷಣ ಸಂಸ್ಥೆ, ಹೊಸದುರ್ಗ ಇವರ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಬುಡಕಟ್ಟು ದಿನಾಚರಣೆ ದಶಮಾನೋತ್ಸವ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬುಡಕಟ್ಟು ಸಮುದಾಯದವರು ತಮ್ಮದೇ ಆದ ವಿಶಿಷ್ಟ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಜೀವನಶೈಲಿಯನ್ನು ಹೊಂದಿದ್ದಾರೆ. ಅವರ ಪರಂಪರೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸರ್ಕಾರ ಮತ್ತು ಸಮಾಜ ಸಂಘಟಿತವಾಗಿ ಕೆಲಸ ಮಾಡಬೇಕಿದೆ. ಈ ಸಮುದಾಯದ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ ಎಂದು ಡಾ. ಬಾಲಾಜಿ ಹೇಳಿದರು.
ಸಂಸ್ಥೆಯ ಅಧ್ಯಕ್ಷರು ಹಾಗೂ ಹಿರಿಯ ನ್ಯಾಯವಾದಿ ಎಂ. ಶಿವಲಿಂಗಪ್ಪ ಮಾತನಾಡಿ, ಬುಡಕಟ್ಟು ಸಮುದಾಯದವರಿಗೆ ಸರ್ಕಾರ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಶಿಕ್ಷಣ ಸಂಸ್ಥೆಗಳು ಕೂಡ ಅವರಿಗೆ ಹೆಚ್ಚಿನ ರಿಯಾಯಿತಿಗಳನ್ನು ನೀಡುವ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ಕನ್ನಡ ಜಾನಪದ ಪರಿಷತ್ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಡಾ. ಬಾ. ಮೈಲಾರಪ್ಪ ಮಾತನಾಡಿ, ಪರಿಷತ್ ವತಿಯಿಂದ ಬುಡಕಟ್ಟು ಸಮುದಾಯದವರಿಗೆ ನಿರಂತರವಾಗಿ ಸಹಾಯ, ಸಹಕಾರ ನೀಡುವುದರ ಜೊತೆಗೆ ಅವರನ್ನು ಗೌರವಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬುಡಕಟ್ಟು ಸಮುದಾಯದ ಹಾಡಿಗಳಿಗೆ ಭೇಟಿ ನೀಡಿ ವಿಶೇಷ ಸಮೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು.
ಮಾಜಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಂ.ಜಿ. ತಿಪ್ಪೇಸ್ವಾಮಿ ಅವರು ಕನ್ನಡ ಜಾನಪದ ಪರಿಷತ್ ನಡೆಸುತ್ತಿರುವ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ದಶಮಾನೋತ್ಸವದ ಅಂಗವಾಗಿ ಹತ್ತು ಜನಪದ ಕಲಾವಿದರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಸ್ಥಳೀಯ ಇಬ್ಬರು ಬುಡಕಟ್ಟು ಕಲಾವಿದರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬಿ.ಎಡ್. ಕಾಲೇಜಿನ ಪ್ರಾಂಶುಪಾಲರಾದ ಡಾ. ಟಿ. ಬಸಪ್ಪ, ಮೊರಾರ್ಜಿ ಶಾಲೆಯ ಪ್ರಾಂಶುಪಾಲರು ಹಾಗೂ ಕನ್ನಡ ಜಾನಪದ ಪರಿಷತ್ ಹೊಸದುರ್ಗ ತಾಲೂಕು ಅಧ್ಯಕ್ಷರಾದ ಪರಶುರಾಮ್, ಹೊಳಲ್ಕೆರೆ ತಾಲೂಕು ಅಧ್ಯಕ್ಷರು ಹಾಗೂ ಮುಖ್ಯ ಶಿಕ್ಷಕರಾದ ರಾ.ಸು. ತಿಮ್ಮಯ್ಯ, ಕಲಾವಿದ ಡಾ. ಚಂದ್ರು, ಎಚ್.ಆರ್. ರುದ್ರಸ್ವಾಮಿ, ಕುಮಾರಸ್ವಾಮಿ, ಉಮಾದೇವಿ, ನೀಲಮ್ಮ, ಪ್ರತಿಭಾ ಬಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕನ್ನಡ ಜಾನಪದ ಪರಿಷತ್ ಗೀತೆಯನ್ನು ಕಂಟೇಶ್ ಹಾಗೂ ಕಲಾವಿದ ಚಂದ್ರು ಹಾಡಿದರು.
