ಮೈಸೂರು: ಮೃತ ಗ್ರಾಹಕರ ಖಾತೆಯ ಹಣವನ್ನು ದುರುಪಯೋಗಪಡಿಸಿಕೊಂಡು ನಂಬಿಕೆ ದ್ರೋಹ ಎಸಗಿದ್ದ ಎಸ್ಬಿಐ ಬ್ಯಾಂಕ್ ಮಾಜಿ ಮ್ಯಾನೇಜರ್ಗೆ ಮೈಸೂರಿನ ನ್ಯಾಯಾಲಯ 1 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಮೈಸೂರು ಚಾಮುಂಡಿ ಪುರಂ ಶಾಖೆಯ ಚೀಫ್ ಮ್ಯಾನೇಜರ್ ಆಗಿದ್ದ ಎ.ವಿ.ಕುಲಕರ್ಣಿ @ ಅನಿರುದ್ಧ ವಸಂತರಾವ್ ಕುಲಕರ್ಣಿ ಶಿಕ್ಷೆಗೆ ಗುರಿಯಾಗಿದ್ದಾರೆ.
ಆರೋಪಿ ಎ.ವಿ.ಕುಲಕರ್ಣಿ ಅವರು 13-05-2009 ರಿಂದ 23-12-2011 ರ ಅವಧಿಯಲ್ಲಿ ಚಾಮುಂಡಿಪುರಂ ಎಸ್ಬಿಐ ಶಾಖೆಯಲ್ಲಿ ಮ್ಯಾನೇಜರ್ ಆಗಿದ್ದರು.
ಶಾಖೆಯ ಖಾತೆದಾರರಾಗಿದ್ದ ಕೃಷ್ಣ ಅಯ್ಯರ್ ಎಂಬುವವರು 7-04-2005 ರಂದು ಮೃತಪಟ್ಟಿದ್ದರು. ಇದು ತಿಳಿದಿದ್ದರೂ ಆರೋಪಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ಮೃತ ಕೃಷ್ಣ ಅಯ್ಯರ್ ಅವರ ಖಾತೆ ಸಂಖ್ಯೆ 10570184980 ರಿಂದ ರೂ.40,53,000/- ಹಾಗೂ ಬ್ಯಾಂಕಿನ ಇಂಟರೆಸ್ಟ್ ಖಾತೆ ಸಂಖ್ಯೆ 97870173465 ರಿಂದ ರೂ.21,04,127/- ಸೇರಿ ಒಟ್ಟು ರೂ.61,57,127 ಹಣವನ್ನು ತಮ್ಮ ಮಗ ಮತ್ತು ಪತ್ನಿಯ ಖಾತೆಗಳಿಗೆ ವರ್ಗಾಯಿಸಿಕೊಂಡು ಡ್ರಾ ಮಾಡಿಕೊಂಡಿದ್ದರು.
ಬಳಿಕ ಬ್ಯಾಂಕಿನ ಮೇಲಾಧಿಕಾರಿಗಳ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡು, ಅಕ್ರಮವಾಗಿ ಡ್ರಾ ಮಾಡಿದ್ದ ಹಣದಲ್ಲಿ ಒಟ್ಟು ರೂ.62 ಲಕ್ಷ ಹಣವನ್ನು ಬ್ಯಾಂಕ್ಗೆ ಭಾಗಶಃ ಮರುಪಾವತಿ ಮಾಡಿದ್ದರು.
ಈ ಸಂಬಂಧ ಆರೋಪಿಯ ವಿರುದ್ಧ ಮೈಸೂರಿನ ಕೆ.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೆ.ಆರ್. ಪೊಲೀಸ್ ಠಾಣೆಯ ಅಂದಿನ ಪೊಲೀಸ್ ಉಪ ನಿರೀಕ್ಷಕರಾಗಿದ್ದ ಪ್ರಶಾಂತ್ ಅವರು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ಮೈಸೂರಿನ ಪ್ರಥಮ ಸಿ.ಜೆ.ಎಂ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನ್ಯಾಯಾಲಯವು ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ ಒಂದನೇ ಅಧಿಕ ಸಿ.ಜೆ.ಎಂ ನ್ಯಾಯಾಧೀಶರಾದ ಪ್ರಕಾಶ್.ವಿ ಅವರು ಆರೋಪಿಯ ವಿರುದ್ಧದ ಅಪರಾಧವು ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ಕೆ.ಪ್ರಕಾಶ್ ಅವರು ವಾದ ಮಂಡಿಸಿದ್ದರು.
ಆರೋಪಿಗೆ 1 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿದ್ದು, ದಂಡದಲ್ಲಿ ರೂ. 40 ಸಾವಿರ ರೂ.ಗಳನ್ನು ಬ್ಯಾಂಕಿಗೆ ಪರಿಹಾರವಾಗಿ ನೀಡಲು ಆದೇಶಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
