ದೇವದುರ್ಗ: ಜಾನಪದವು ತೊಟ್ಟಿಲಿನಿಂದ ಚಟ್ಟದವರೆಗಿನ ಬದುಕಿನ ಪಯಣವಾಗಿದ್ದು, ಅದು ಎಂದಿಗೂ ನಶಿಸುವುದಿಲ್ಲ ಎಂದು
ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರು ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯರಾದ ಡಾ. ಜಾನಪದ ಎಸ್. ಬಾಲಾಜಿ ತಿಳಿಸಿದರು.
ಜಾನಪದ ಕಾಲಕ್ರಮೇಣ ಪರಿವರ್ತನೆಗೊಳ್ಳುತ್ತಾ ಹೊಸ ರೂಪದಲ್ಲಿ ಮುಂದುವರಿಯುತ್ತದೆ ಎಂದು ಡಾ. ಜಾನಪದ ಎಸ್. ಬಾಲಾಜಿ ಹೇಳಿದರು.
ದೇವದುರ್ಗದ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಜಾನಪದ ಪರಿಷತ್ ದೇವದುರ್ಗ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೌಖಿಕ ಪರಂಪರೆ, ಜಾನಪದ ಗೀತೆಗಳು, ಕಥೆಗಳು ಹಾಗೂ ಪ್ರದರ್ಶನ ಕಲೆಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ಎಲ್ಲರ ಮೇಲಿದೆ. ವಿಶೇಷವಾಗಿ ಶಾಲಾ-ಕಾಲೇಜುಗಳು ಜಾನಪದ ಸಂರಕ್ಷಣೆ ಮತ್ತು ಪ್ರಸಾರಕ್ಕೆ ಹೆಚ್ಚಿನ ಒತ್ತು ನೀಡಬೇಕು. ಜಾನಪದ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಯುವಜನರಿಗೆ ಪರಿಚಯಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಡಾ. ಜಾನಪದ ಎಸ್. ಬಾಲಾಜಿ ಸಲಹೆ ನೀಡಿದರು.
ಕನ್ನಡ ಜಾನಪದ ಪರಿಷತ್ ದೇವದುರ್ಗ ತಾಲೂಕು ಅಧ್ಯಕ್ಷ ಬಸವರಾಜ್ ಮಡಿವಾಳ ಮಾತನಾಡಿ, ಜಾನಪದವನ್ನು ಎಲ್ಲರಿಗೂ ತಲುಪಿಸುವ ನಿಟ್ಟಿನಲ್ಲಿ ಕನ್ನಡ ಜಾನಪದ ಪರಿಷತ್ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ದೇವದುರ್ಗ ತಾಲೂಕಿನಲ್ಲಿ ಜಾನಪದದ ಕುರಿತು ಜಾಗೃತಿ ಮೂಡಿಸುವ ಹಲವು ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ವಿಭಾಗೀಯ ಸಂಚಾಲಕರಾದ ಡಾ. ಶರಣಪ್ಪ ಗೋನಾಳ, ರಾಯಚೂರು ತಾಲೂಕಿನಲ್ಲಿ ಮುಂದಿನ ದಿನಗಳಲ್ಲಿ ಜಾನಪದ ಸಮ್ಮೇಳನವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಕನ್ನಡ ಜಾನಪದ ಪರಿಷತ್ನ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
