ಯಳಂದೂರು: ಯಳಂದೂರಿನಲ್ಲಿ ಶಿಕ್ಷಕರ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡಲಾಗಿದೆ, ಸುಂದರ ಭವನ ನಿರ್ಮಿಸಲು ಅಗತ್ಯ ನೆರವು ನೀಡಲಾಗುವುದು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಶಿಕ್ಷಕರಿಗೆ ಭರವಸೆ ನೀಡಿದರು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕರು, ಬಹು ವರ್ಷಗಳಿಂದ ಇಲ್ಲಿ ಶಿಕ್ಷಕರಿಗೆ ಭವನ ನಿರ್ಮಾಣಕ್ಕೆ ನಿವೇಶನದ ಸಮಸ್ಯೆ ಇತ್ತು, ಇದನ್ನು ನಿವಾರಿಸಲು ಕ್ರಮ ವಹಿಸಿದ್ದೇನೆ, ಭವನ ನಿರ್ಮಾಣಕ್ಕೆ ಬೇಕಾದ ಅಗತ್ಯ ನೆರವು ನೀಡಲು ನಾನು ಕ್ರಮ ವಹಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.
ಶಿಕ್ಷಕರು ಮಕ್ಕಳಿಗೆ ಉತ್ತಮ ಬೋಧನೆ ನೀಡುವ ನಿಟ್ಟಿನಲ್ಲಿ ಶ್ರಮ ವಹಿಸಬೇಕು,ಅವರನ್ನು ಸಂಸ್ಕಾರವಂತರಾಗಿ ಮಾಡಬೇಕು,ನಮ್ಮ ಜಿಲ್ಲೆಯಲ್ಲಿ ಈ ಬಾರಿ ಎಸ್ಎಸ್ಎಲ್ಸಿಯಲ್ಲಿ ಉತ್ತಮ ಫಲಿತಾಂಶವನ್ನು ನೀಡುವ ನಿಟ್ಟಿನಲ್ಲಿ ಗುಣಮಟ್ಟದ ಬೋಧನೆ ಮಾಡಬೇಕು ಎಂದು ಎ.ಆರ್.ಕೃಷ್ಣಮೂರ್ತಿ ಸಲಹೆ ನೀಡಿದರು.
ಮುಖ್ಯ ಭಾಷಣಕಾರ ಬಿಪಿನ್ ನಾಗರಾಜು ಮಾತನಾಡಿ, ಶಿಕ್ಷಕರ ದಿನಾಚರಣೆಯನ್ನು ನಾವು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಹುಟ್ಟು ಹಬ್ಬದಂದು ಆಚರಿಸುತ್ತೇವೆ ಇದಕ್ಕೂ ಮುಂಚೆ ಮಹಾರ್ ಸೈನಿಕರು ಪೇಶ್ವೆಗಳನ್ನು ಸೋಲಿಸಿ ಅವರ ನಾಯಕ ಸಿದನಾಕ ಎಲಿಜೆಬೆತ್ ರಾಣಿಯಿಂದ ನಮಗೆ ಶಿಕ್ಷಣ ಸಮಾನತೆ ನೀಡಿ ಎಂದು ಕೇಳಿದ್ದು ಇದರ ಫಲವಾಗಿ 1835 ರಲ್ಲಿ ಮೆಕಾಲೆ ಇಲ್ಲಿಗೆ ಬಂದು ಹೊಸ ಶಿಕ್ಷಣ ನೀತಿ ರೂಪಿಸಿದ್ದು ನಮ್ಮೆಲ್ಲರಿಗೂ ಶಿಕ್ಷಣ ದೊರಕಿದ ಮೊದಲ ಜಯವಾಯಿತು ಎಂದು ಹೇಳಿದರು.
ನಂತರ ಜ್ಯೋತಿ ಹಾಗೂ ಸಾವಿತ್ರಿ ಬಾಫುಲೆ ದಂಪತಿ, ಷೇಕ್ ಫಾತಿಮಾ ಶಿಕ್ಷಕರಾಗಿ ಎಲ್ಲಾ ಅವಮಾನ ಸಹಿಸಿ ಹೆಣ್ಣು ಮಕ್ಕಳಿಗೂ ಶಿಕ್ಷಣ ನೀಡಿದರು,ಶಾಹು ಮಹಾರಾಜರು ಶೇ. 50 ರಷ್ಟು ಮೀಸಲಾತಿ ನೀಡಿದರು,ನಾಲ್ವಡಿ ಕೃಷ್ಣರಾಜ ಒಡೆಯರ್ ಶೇ. 75 ರಷ್ಟು ಮೀಸಲಾತಿ ನೀಡಿದರು ನಂತರ ಅಂಬೇಡ್ಕರ್ ಸಂವಿಧಾನಾತ್ಮಕವಾಗಿ ನಮಗೆ ನೀಡಿದ ಸೌಲಭ್ಯಗಳು ಇದು ನೈಜ ಇತಿಹಾಸ ಎಂದು ವಿವರಿಸಿದರು.
ಇತಿಹಾಸ ಓದದೆ ಪಾಠ ಮಾಡುವ ಶಿಕ್ಷಕ ದ್ರೋಹಿಯಾಗುತ್ತಾನೆ. ಹಾಗಾಗಿ ನಾವು ನಮ್ಮ ಜವಾಬ್ದಾರಿ ಅರಿತು, ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಬೋಧನೆ ಮಾಡಬೇಕು, ಜಾತಿ, ಧರ್ಮದ ವಿಷಬೀಜ ಬಿತ್ತಬಾರದು ಎಂದು ತಿಳಿಹೇಳಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರು ಹಾಗೂ ಸಾಧನೆಗೈದ ಇತರ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಎಸ್. ಪ್ರಭುಪ್ರಸಾದ್, ಇಒ ಎ.ಬಿ. ವೇಣು, ಸಿಪಿಐ ಸುಬ್ರಹ್ಮಣ್ಯ, ಬಿಇಒ ಎಂ. ಮಾರಯ್ಯ, ಬಿಆರ್ಸಿ ಸಿ. ಕುಮಾರಿ, ದೈಹಿಕ ಪರಿವೀಕ್ಷಕ ಶಾಂತರಾಜು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಮ್ಮನಪುರ ಮಹೇಶ್, ಕೆ ಪಿ ಎಸ್ ಶಾಲೆಯ ಉಪ ಪ್ರಾಂಶುಪಾಲರಾದ ಡಾ. ಆರ್. ನಂಜುಂಡಯ್ಯ,ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಪ್ರಧಾನ ಕಾರ್ಯದರ್ಶಿ ಸೋಮಣ್ಣ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.
