ಬೆಂಗಳೂರು: ಸಾಲ ಮನ್ನಾಕ್ಕೆ ನೆರವು ಕೋರಿ ದೆಹಲಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲಾಗುವುದು ಎಂದು ಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ,
ಬರಗಾಲ ಎಂದು ಪ್ರಧಾನಮಂತ್ರಿಗಳೇ ಹೇಳಿದ್ದಾರೆ, ಕೇಂದ್ರ ಸರ್ಕಾರ ಸಾಲಮನ್ನಾ ಮಾಡಿಸುವ ಜವಾಬ್ದಾರಿ ಹೊರಬೇಕು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಇತರೆ ನಾಯಕರು ತಮ್ಮೊಂದಿಗೆ ದೆಹಲಿಗೆ ಬಂದು ಕೇಂದ್ರ ಸರ್ಕಾರದಿಂದ ಅನುದಾನ ಹಾಗೂ ರೈತರ ಸಾಲ ಮನ್ನಾಕ್ಕೆ ಆಗ್ರಹಿಸಬೇಕು ಬರಗಾಲಕ್ಕೆ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಬರ ಪರಿಸ್ಥಿತಿ ಕುರಿತಂತೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ವಿಪಕ್ಷಗಳಿಗೆ ರೈತರು ಹಾಗೂ ಬರ ಪರಿಸ್ಥಿತಿಯ ಬಗ್ಗೆ ಅಧ್ಯಯನ ಮಾಡಲು, ಚರ್ಚಿಸಲು ಕಿಂಚಿತ್ತೂ ಆಸಕ್ತಿ ಇಲ್ಲ. ಬರ ಪರಿಸ್ಥಿತಿ ಚರ್ಚೆ ಬಗ್ಗೆ ಜನತಾ ದಳ ಮತ್ತು ಬಿಜೆಪಿ ಶಾಸಕರೇ ನನ್ನ ಬಳಿ ಬಂದು ಬೇಸರ ತೋಡಿಕೊಂಡಿದ್ದಾರೆ. ಅದಕ್ಕಾಗಿಯೇ ಪ್ರತ್ಯೇಕವಾಗಿ ವಿಶೇಷ ಅಧಿವೇಶನ ನಡೆಸಲಿದ್ದೇವೆ. ಆಯಾ ಕ್ಷೇತ್ರಗಳ ಭಾವನೆ, ಪರಿಸ್ಥಿತಿ ಅರ್ಥಮಾಡಿಕೊಂಡು ನಾನು ಅವರಿಗೆ ಸಹಾಯ ಮಾಡಬೇಕು. ನೈಜ ಪರಿಸ್ಥಿತಿಯನ್ನು ಅಧ್ಯಯನ ಮಾಡುವ ಬದಲು ವಿಪಕ್ಷಗಳು ರಾಜಕಾರಣ ಮಾಡುತ್ತಿವೆ ಎಂದು ಡಿಕೆಶಿ ಬೇಸರ ಪಟ್ಟರು.
ರೈತರ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಸಲು ರಾಜ್ಯ ಸರ್ಕಾರ ಮೂರು ದಿನಗಳ ವಿಶೇಷ ಅಧಿವೇಶನ ಕರೆದಿದೆ. ಈ ಅಧಿವೇಶನದಲ್ಲಿ ಸಂಪೂರ್ಣವಾಗಿ ರಾಜ್ಯದ ಬರ ಪರಿಸ್ಥಿತಿ, ರೈತರ ತೊಂದರೆಗಳು ಮತ್ತು ಪಶ್ಚಿಮ ಘಟ್ಟಗಳ ಕುರಿತಾದ ಕಸ್ತೂರಿರಂಗನ್ ವರದಿಗೆ ರಾಜ್ಯ ಸಲ್ಲಿಸಬೇಕಾದ ಆಕ್ಷೇಪಣೆಗಳ ಬಗ್ಗೆ ಮಾತ್ರ ಚರ್ಚಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ನೀತಿ ಆಯೋಗದ ಜತೆಗಿನ ಸಭೆಯಲ್ಲಿ ರಾಜ್ಯಕ್ಕೆ ಅನುದಾನ ಹಂಚಿಕೆ ಸರಿಯಾಗಿ ಆಗಬೇಕು ಎಂದು ಆಗ್ರಹಿಸಿದ್ದೀರಿ ಎಂದು ಕೇಳಿದಾಗ,ಹೊಸ ಬೆಂಗಳೂರು ನಿರ್ಮಾಣ ಮಾಡಬೇಕೆಂದು ನೀತಿ ಆಯೋಗದ ಉಪಾಧ್ಯಕ್ಷರ ಬಳಿ ಚರ್ಚಿಸಲಾಗಿದೆ. ಅದಕ್ಕೆ ಅಗತ್ಯವಿರುವ ನೆರವನ್ನು ಸರ್ಕಾರ ನೀಡಲಿದೆ ಎಂದು ತಿಳಿಸಿದರು.
ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) ತಿದ್ದುಪಡಿ ವಿಧೇಯಕವನ್ನು ವಾಪಸ್ ಪಡೆದಿರುವ ಕುರಿತು ಸಿಎಂ ‘ಯು-ಟರ್ನ್’ ಮಾಡಿದ್ದಾರೆ ಎಂಬ ಆರೋಪಗಳ ಬಗ್ಗೆ ಕೇಳಿದ ಪ್ರಶ್ನೆಗೆ, ನಾನು ಯೂಟರ್ನ್ ಏಕೆ ಮಾಡಬೇಕು. ಜನರ ಭಾವನೆಗಳಿಗೆ ಬೆಲೆ ನೀಡಲಾಗಿದೆ. ಯಡಿಯೂರಪ್ಪ, ಬೊಮ್ಮಾಯಿ ಅವರ ಕಾಲದಲ್ಲಿ ಏನಾಗಿದೆ ಎಂಬ ಪಟ್ಟಿ ಬಿಡುಗಡೆ ಮಾಡುತ್ತೇವೆ. ಈ ಬಗ್ಗೆ ಚರ್ಚೆಯಾಗಬೇಕು. ಲಾಲ್ ಬಾಗ್ ನಲ್ಲಿಯೇ ಟನಲ್ ಮಾಡಬೇಕೆಂಬ ಉದ್ದೇಶವಿಲ್ಲ. ಇದಕ್ಕೆ ಪರ್ಯಾಯ ಮಾರ್ಗವನ್ನು ಪರಿಶೀಲಿಸಲಾಗುವುದು. ಹಿಂದೆ ಸಿದ್ದರಾಮಯ್ಯನವರು ಸ್ಟೀಲ್ ಬ್ರಿಡ್ಜ್ ಮಾಡಲು ಹೊರಟಾಗಲು ಬಿಜೆಪಿ ವಿರೋಧಿಸಿತ್ತು, ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಟನಲ್ ರಸ್ತೆ, ಡಬಲ್ ಡೆಕ್ಕರ್ ಮಾರ್ಗಗಳು, ಯೋಜನೆಗಳು ಅತ್ಯಗತ್ಯ. ಟನಲ್ ರಸ್ತೆ ಬೇಡ ಎನ್ನುವವರು ಅದಕ್ಕೆ ಪರ್ಯಾಯ ಏನು ಎಂಬುದನ್ನು ಹೇಳಲಿ ಎಂದು ಸಿಎಂ ಸವಾಲು ಹಾಕಿದರು.
ನಾನು ಸಿಎಂ ಸ್ಥಾನದಲ್ಲಿ ಕೂತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಕೇಂದ್ರ ಸಚಿವ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಬಳಸುವ ಪದಗಳನ್ನು ಬಳಸಲಾಗುವುದಿಲ್ಲ. ನನಗೆ ಗೌರವ ಕೊಡದಿದ್ರೂ ನಾಡಿನ ಜನತೆ ಹಾಗೂ ಪಕ್ಷ ಕೊಟ್ಟಿರುವ ಸ್ಥಾನಕ್ಕಾದರೂ ಬೆಲೆ ಕೊಡಲಿ. ನಿಮ್ಮ ನಾಲಿಗೆಯ ಮೇಲೆ ಹತೋಟಿ ಇರಲಿ ಎಂದು ನಮ್ರತೆಯಿಂದ ಹೇಳುತ್ತಿದ್ದೇನೆ ಅಷ್ಟೇ ಎಂದರು.
ಚರ್ಚೆ ಮಾಡಬೇಕೆನ್ನುವ ಕಾರಣದಿಂದ ವಿಧೇಯಕವನ್ನು ಹಿಂಪಡೆಯಲಾಗಿದೆ. 16.5 ಕಿ.ಮೀ ಟನಲ್ ರಸ್ತೆ ಯೋಜನೆಗಾಗಿ ಲಾಲ್ಬಾಗ್ ಜಾಗವನ್ನು ಕಬಳಿಸುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ. ನಾವು ಉದ್ಯಾನವನಗಳನ್ನು ಮಾರಾಟ ಮಾಡುತ್ತಿಲ್ಲ. ಮೆಟ್ರೋಗೆ ಜಾಗ ಕೊಡಲು ಭೂಮಿಯನ್ನು ವರ್ಗಾಯಿಸಬೇಕು ಎಂದು ಸ್ಪಷ್ಟಪಡಿಸಿದರು.
ನಾನು ಅವರಷ್ಟು ವಿದ್ಯಾವಂತರಲ್ಲದಿದ್ದರೂ ನನಗೂ ದೇವರು ಅಷ್ಟೋ ಇಷ್ಟೋ ಸಾಮಾನ್ಯ ಜ್ಞಾನ ಕೊಟ್ಟಿದ್ದಾರೆ. ಜೆಪಿ ಪಾರ್ಕ್ ಸೇರಿದಂತೆ ಎಲ್ಲಾ ಸ್ಥಳಗಳ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ಅನಾವಶ್ಯಕವಾಗಿ ನನ್ನನ್ನು ಕೆಣಕುವುದು ಬೇಡ ಎಂದು ಡಿಕೆಶಿ ಟಾಂಗ್ ನೀಡಿದರು.
ಮೆಟ್ರೋ, ಶಾಸಕರ ಭವನ,ಪ್ರೆಸ್ ಕ್ಲಬ್, ಬಸವ ಭವನ, ಹೈಕೋರ್ಟ್ ಪಾರ್ಕಿಂಗ್ ಹಾಗೂ ಇಂದಿರಾ ಗಾಂಧಿ ಫೌಂಟೇನ್ಗೆ ಹಿಂದೆ ಸಾರ್ವಜನಿಕ ಭೂಮಿಯನ್ನೇ ನೀಡಲಾಗಿತ್ತು. ಕಾಲಕಾಲಕ್ಕೆ ಕೆಲವು ನಿರ್ಣಯಗಳಾಗಿವೆ. ಎಲ್ಲಾ ಸೇರಿ ಕೆಲಸ ಮಾಡೋಣ ಎಂದು ಈಗಾಗಲೇ ಹೇಳಿದ್ದೇನೆ. ಸಲಹೆ ಸ್ವೀಕಾರ ಮಾಡಿದರೆ ಯೂ ಟರ್ನ್ ಮಾಡಿದ್ದೇನೆ ಎಂದಾಗುತ್ತದೆಯೇ ಎಂದು ಸಿಎಂ ಮರು ಪ್ರಶ್ನಿಸಿದರು.
ಸಚಿವ ನಾಗೇಂದ್ರ ಅವರು ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಿದರು. ಆದರೂ ಪಾದಯಾತ್ರೆ ಮಾಡುತ್ತಿದ್ದಾರೆ. ನನ್ನ ಯಾತ್ರೆಯನ್ನೂ ನೀವು ನೋಡಿ ಎಂದು ಮಾರ್ಮಿಕವಾಗಿ ನುಡಿದರು.
ಸರ್ಕಾರದ ಮತ್ತೊಂದು ವಿಕೆಟ್ ಪತನವಾಗಲಿದೆ ಎಂದು ವಿರೋಧ ಪಕ್ಷದವರು ಹೇಳುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ, ನನ್ನನ್ನೇ ಪತನ ಮಾಡುವುದಾಗಿ ಕೆಲವರು ಹೇಳಿದ್ದಾರೆ. ಅದರಲ್ಲಿ ಅವರು ಯಶಸ್ವಿಯಾಗಲಿ ಸಂತೋಷ. ತಪ್ಪು ಮಾಡಿದ್ದರೆ ಎಲ್ಲರೂ ಶಿಕ್ಷೆಗೆ ಒಳಗಾಗಬೇಕು, ಅದಕ್ಕೆ ನಾನೂ ಹೊರತಾಗಿಲ್ಲ ಎಂದು ತಿಳಿಸಿದರು
ಈಗ ನಾನು ಪ್ರಾಸಿಕ್ಯೂಷನ್ ಅನುಮತಿ ಬಗ್ಗೆ ಯೋಚನೆ ಮಾಡಿಲ್ಲ. ಬಿ. ನಾಗೇಂದ್ರ, ಜಿ. ಜನಾರ್ದನ ರೆಡ್ಡಿ ಹಾಗೂ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಹಲವು ನಾಯಕರ ಪ್ರಾಸಿಕ್ಯೂಷನ್ಗೆ ಸಂಬಂಧಿಸಿದಂತೆ ರಾಜ್ಯಪಾಲರಿಂದ ಕಡತಗಳು ಬಂದಿವೆ. ಅದನ್ನು ಇನ್ನೂ ಕಾನೂನಾತ್ಮಕವಾಗಿ ಪರಿಶೀಲಿಸಿಲ್ಲ. ಸಾರಾಂಶ ಸರಿಯಿದೆಯೇ ಎಂದು ಪರಿಶೀಲಿಸಬೇಕಿದೆ,ಈ ಬಗ್ಗೆ ಯಾವುದೇ ಆತುರದ ನಿರ್ಧಾರ ಕೈಗೊಳ್ಳಲಾಗುವುದಿಲ್ಲ ಎಂದು ಡಿ.ಕೆ ಶಿವಕುಮಾರ್ ಸ್ಪಷ್ಟಪಡಿಸಿದರು.
