ಚಾಮರಾಜನಗರ, ಸೆ.3: ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಸಕಾಲದಲ್ಲಿ ತ್ವರಿತವಾಗಿ ಪರಿಹರಿಸಲು ಜಿಲ್ಲೆಯಾದ್ಯಂತ ಸೆಪ್ಟೆಂಬರ್ 5ರಿಂದ ಪ್ರಜಾಸೇವಾ ಆಂದೋಲನ ಅಭಿಯಾನ ಸಭೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ತಿಳಿಸಿದರು.
ಈ ಅಭಿಯಾನದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಕಲ ಸಿದ್ದತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲೆಯ ಎಲ್ಲಾ ತಾಲೂಕು ಹಾಗೂ ಹೋಬಳಿಮಟ್ಟದಲ್ಲಿ ಆಯೋಜನೆಯಾಗುತ್ತಿರುವ ಪ್ರಜಾಸೇವಾ ಆಂದೋಲನ ಅಭಿಯಾನದ ಪೂರ್ವಸಿದ್ದತಾ ಸಭೆಯಲ್ಲಿ ಅವರು ಮಾತನಾಡಿದರು.
ಜನರ ಮನೆಬಾಗಿಲಿನಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ಸಾರ್ವಜನಿಕ ಕುಂದುಕೊರತೆ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಅಭಿಯಾನದ ಅಂಗವಾಗಿ ಪ್ರತಿ ತಿಂಗಳ 1ನೇ ಹಾಗೂ 3ನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲೂಕುಮಟ್ಟದಲ್ಲಿ ಸಭೆ ನಡೆಯಲಿದೆ. ಹಾಗೆಯೇ ಪ್ರತಿತಿಂಗಳ 2ನೇ ಹಾಗೂ 4ನೇ ಶನಿವಾರ ಆಯಾ ವಿಧಾನಸಭಾ ಕ್ಷೇತ್ರಗಳ ಶಾಸಕರ ಅಧ್ಯಕ್ಷತೆಯಲ್ಲಿ ಹೋಬಳಿಮಟ್ಟದ ಸಭೆಗಳನ್ನು ನಡೆಸಲಾಗುತ್ತದೆ. ತಾಲೂಕುಮಟ್ಟದ ಅಭಿಯಾನ ಸಭೆಯ ಸಂಧರ್ಭದಲ್ಲಿ ಇತರೆ ಯಾವುದೇ ಸಭೆಗಳನ್ನು ಅಧಿಕಾರಿಗಳು ನಡೆಸಬಾರದೆಂದು ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.
ತಾಲೂಕು ಹಾಗೂ ಹೋಬಳಿಮಟ್ಟದಲ್ಲಿ ನಡೆಯುವ ಪ್ರಜಾಸೇವಾ ಆಂದೋಲನ ಅಭಿಯಾನದ ಸಭೆಗಳಿಗೆ ಯಾವುದೇ ಅಧಿಕಾರಿಗಳು ಗೈರಾಗಬಾರದು, ಸಭೆಗಳಲ್ಲಿ ಸಾರ್ವಜನಿಕರಿಂದ ಕುಂದುಕೊರತೆಗಳನ್ನು ಆಲಿಸುವುದಲ್ಲದೆ, ಅವರೊಂದಿಗೆ ಚರ್ಚಿಸಿ, ಸಮಾಲೋಚಿಸಿ ಅಭಿಪ್ರಾಯ ಸಂಗ್ರಹಿಸಬೇಕು. ಸರ್ಕಾರದ ಯೋಜನೆ, ಕಾರ್ಯಕ್ರಮಗಳ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಬೇಕು. ಸಾರ್ವಜನಿಕರಿಗೆ ಕುಡಿಯುವ ನೀರು, ವೈದ್ಯಕೀಯ ವ್ಯವಸ್ಥೆ, ಕುಳಿತುಕೊಳ್ಳಲು ಆಸನಗಳು, ನೆರಳಿನ ವ್ಯವಸ್ಥೆ ಮಾಡಬೇಕು. ಅಭಿಯಾನ ಆಯೋಜನೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರ ವಹಿಸುವಂತೆ ಸೂಚಿಸಿದರು.
ಪ್ರಜಾಸೇವಾ ಆಂದೋಲನ ಅಭಿಯಾನದ ಅರ್ಜಿಗಳನ್ನು ತಾಲೂಕು ಕಚೇರಿ, ನಗರಸಭೆ ಸೇರಿದಂತೆ ಸಂಬಂಧಿಸಿದ ಕಚೇರಿಗಳಲ್ಲಿ ಸಾರ್ವಜನಿಕರು ಪಡೆದು ಭರ್ತಿಮಾಡಿ ತಾಲೂಕು ಹಾಗೂ ಹೋಬಳಿಮಟ್ಟದ ಸಭೆಗಳಲ್ಲಿ ಸಲ್ಲಿಸಬಹುದು. ಸಭೆಗಳಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಎರಡು ಪ್ರತ್ಯೇಕ ಸರತಿಸಾಲುಗಳಲ್ಲಿ ಬರುವಂತೆ ವ್ಯವಸ್ಥೆ ಮಾಡಬೇಕು. ಮೊದಲ ಸರತಿಸಾಲಿನಲ್ಲಿ ಸಮಸ್ಯೆಗಳ ಇತ್ಯರ್ಥಕ್ಕಾಗಿ ಹೊಸದಾಗಿ ಅರ್ಜಿ ಸಲ್ಲಿಸುವವರು ಹಾಗೂ ಎರಡನೇ ಸಾಲಿನಲ್ಲಿ ಹಿಂದೆ ಅರ್ಜಿ ಸಲ್ಲಿಸಿ ಪರಿಹಾರವಾಗದಿರುವ ಅರ್ಜಿದಾರರು ಬರಬೇಕು. ಸಭೆ ನಡೆಯುವ ಸ್ಥಳದಲ್ಲಿ ಸಾರ್ವಜನಿಕರು ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಕೌಂಟರ್ಗಳನ್ನು ತೆರೆಯಬೇಕು ಎಂದು ಸಲಹೆ ನೀಡಿದರು
ಪ್ರತಿ ಬುಧವಾರ ಪ್ರಜಾಸೇವಾ ಆಂದೋಲನ ಸಭೆಗಳಲ್ಲಿ ಸ್ವೀಕೃತವಾದ ಅರ್ಜಿಗಳ ಪರಿಶೀಲನಾ ಕಾರ್ಯ ನಡೆಯಲಿದ್ದು, ಪರಿಹಾರದಿಂದ ಅತೃಪ್ತರಾದವರು ಅಧಿಕಾರಿ ಮುಂದೆ ಖುದ್ದು ಹಾಜರಾಗಿ ಅಹವಾಲು ಮಂಡಿಸಬಹುದಾಗಿದೆ.
ಪ್ರಜಾಸೇವಾ ಆಂದೋಲನ ಅಭಿಯಾನದ ಸಭೆ ಆಯೋಜನೆಯಲ್ಲಿ ಯಾವುದೇ ನ್ಯೂನತೆಗಳಿಗೂ ಅವಕಾಶವಾಗಬಾರದು ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಡಿ.ವೈ.ಎಸ್.ಪಿ ಸ್ನೇಹರಾಜ್, ನಗರಸಭೆ ಪೌರಾಯುಕ್ತರಾದ ಪರಶುರಾಮ್ ಛಲವಾದಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಕುಮಾರ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಚಂದ್ರಪಾಟೀಲ್, ಜಿಲ್ಲಾ ಕಾರ್ಮಿಕ ಅಧಿಕಾರಿ ರಾಮಚಂದ್ರಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಸೌಭಾಗ್ಯ, ತಹಶೀಲ್ದಾರ್ ಗಿರಿಜಾ, ನಗರಸಭೆ ಪರಿಸರ ಅಭಿಯಂತರರಾದ ರೂಪ, ಇನ್ನಿತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
