ಮೈಸೂರು ಸೆ.1: ಮೈಸೂರಿನ ಹಿನಕಲ್ ಬಡಾವಣೆಯ ಇಂದಿರಾ ಕ್ಯಾಂಟೀನ್ ಗೆ ಇಂದು ಬೆಳಿಗ್ಗೆ ಪೌರಾಡಳಿತ ಸಚಿವ ಹೆಚ್.ಸಿ.ಬಾಲಕೃಷ್ಣ ಅವರು ದಿಢೀರ್ ಭೇಟಿ ನೀಡಿ,ಅಲ್ಲಿನ ಆಹಾರದ ಗುಣಮಟ್ಟ, ಸ್ವಚ್ಛತೆ, ಕುಡಿಯುವ ನೀರು, ಕುಳಿತುಕೊಳ್ಳುವ ವ್ಯವಸ್ಥೆ ಸೇರಿದಂತೆ ಎಲ್ಲವನ್ನೂ ಖುದ್ದು ಪರಿಶೀಲಿಸಿದರು.
ಈ ವೇಳೆ ಕ್ಯಾಂಟೀನ್ ಸಿಬ್ಬಂದಿ ಹಾಗೂ ಪಾಲಿಕೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಇಂದಿರಾ ಕ್ಯಾಂಟೀನ್ ಬಡವರು, ಕಾರ್ಮಿಕರು, ಆಟೋ ಚಾಲಕರು ಮತ್ತು ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿದೆ. ಕಡಿಮೆ ದರದಲ್ಲಿ ಗುಣಮಟ್ಟದ, ಶುಚಿಯಾದ ಆಹಾರ ನೀಡಬೇಕು. ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಖಡಕ್ ಸೂಚನೆ ನೀಡಿದರು.
ಬಳಿಕ ಸಚಿವರು ಅಲ್ಲೇ ಸಾರ್ವಜನಿಕರೊಂದಿಗೆ ಕುಳಿತು ಬಿಸಿ ಬಿಸಿ ಇಡ್ಲಿ, ಚಟ್ನಿ, ಸಾಂಬಾರ್ ಸವಿದು ಆಹಾರದ ರುಚಿ ಮತ್ತು ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ಯಾಂಟೀನ್ ಗೆ ಉಪಹಾರಕ್ಕೆ ಬಂದಿದ್ದ ಜನರೊಂದಿಗೆ ಮಾತನಾಡಿ ಅವರ ಅಭಿಪ್ರಾಯ, ಅಹವಾಲುಗಳನ್ನು ಆಲಿಸಿದರು.
ಈ ವೇಳೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು, ಸ್ಥಳೀಯ ಮುಖಂಡರು ಸಚಿವ ಬಾಲಕೃಷ್ಣ ಅವರಿಗೆ ಸಾಥ್ ನೀಡಿದರು.
