ಮೈಸೂರು: ಸಂಗೊಳ್ಳಿ ರಾಯಣ್ಣನ ದೇಶಪ್ರೇಮ, ಆದರ್ಶ, ತತ್ವ, ಸಂದೇಶಗಳು ಇಂದಿನ ಯುವ ಜನಾಂಗಕ್ಕೆ ಪ್ರೇರಕ ಶಕ್ತಿಯಾಗಬೇಕು ಎಂದು ಹಿರಿಯ ಸಮಾಜ ಸೇವಕ ರಘುರಾಮ್ ವಾಜಪೇಯಿ ತಿಳಿಸಿದರು.
ಕುವೆಂಪು ನಗರದಲ್ಲಿರುವ ಕನ್ನೇಗೌಡ ಕ್ರೀಡಾಂಗಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕರ ಬಳಗದ ವತಿಯಿಂದ ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಲೆಜೆಂಡ್ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬ್ರಿಟೀಷರ ಕುಟಿಲ ನೀತಿಯ ವಿರುದ್ಧ ಯುವ ಸೇನೆ ಕಟ್ಟಿ ಹೋರಾಡಿ, ಪ್ರಾಣವನ್ನೇ ಬಲಿಕೊಟ್ಟ ರಾಯಣ್ಣನ ಜನ್ಮದಿನ ಆಚರಿಸುವುದು ಅವಶ್ಯಕ. ತ್ಯಾಗ, ಬಲಿದಾನಕ್ಕೆ ಮತ್ತೊಂದು ಹೆಸರೇ ರಾಯಣ್ಣ. ಇಂತಹ ಮಹನೀಯರ ಬಗ್ಗೆ ಯುವ ಜನಾಂಗ ಅರಿತು ದೇಶಪ್ರೇಮ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಗೊಳ್ಳಿ ರಾಯಣ್ಣ ಸಮುದಾಯದ ಎಲ್ಲ ವರ್ಗಗಳ ಜನರನ್ನು ಒಟ್ಟುಗೂಡಿಸಿ, ಯುವ ಸೈನ್ಯ ಕಟ್ಟಿ ಬ್ರಿಟೀಷರ ವಿರುದ್ಧ ರಣ ಕಹಳೆಯನ್ನೂದಿದ ವೀರಯೋಧ. ಕಿತ್ತೂರು ರಾಣಿ ಚೆನ್ನಮ್ಮನ ಪರಮ ಬಂಟನಾಗಿ, ಪರಕೀಯರ ವಿರುದ್ಧ ಹೋರಾಡಿದವರು.
ವಿದ್ಯಾರ್ಥಿಗಳು ದೇಶಪ್ರೇಮ ಮೈಗೂಡಿಸಿಕೊಳ್ಳಬೇಕು
ದೇಶದ ಶಕ್ತಿಯಾದ ವಿದ್ಯಾರ್ಥಿಗಳು ದೇಶಸೇವೆ ಮಾಡಲು ಮುಂದಾಗಬೇಕು ಎಂದು ರಘುರಾಮ್ ವಾಜಪೇಯಿ
ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ವೀಣಾ, ಸಿ ಎಸ್ ರಘು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕರ ಬಳಗದ ಅಧ್ಯಕ್ಷ ರವಿತೇಜ, ವಿನಯ್ ಕಣಗಾಲ್, ರಾಕೇಶ್, ಪವನ್, ರಾಜಗೋಪಾಲ್ ಮತ್ತಿತರರು ಹಾಜರಿದ್ದರು.
