ಮೈಸೂರು: ದೇಶದ ಗಡಿಯಲ್ಲಿ ಸೈನಿಕರು ಹಗಲು-ರಾತ್ರಿ ಎನ್ನದೆ ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವುದರಿಂದ ದೇಶಾದ್ಯಂತ ಎಲ್ಲಾ ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ ಎಂದು ನಾಗಮಂಗಲದ ತಹಸೀಲ್ದಾರ್ ಲೆ. ಕರ್ನಲ್ ಅಶೋಕ್ ಯು.ಎಸ್ ತಿಳಿಸಿದರು.
ಸೈನಿಕರ ತ್ಯಾಗ, ಶಿಸ್ತು, ದೇಶಪ್ರೇಮ ಮತ್ತು ಕರ್ತವ್ಯನಿಷ್ಠೆ ಪ್ರತಿಯೊಬ್ಬ ನಾಗರಿಕನಿಗೂ ಆದರ್ಶವಾಗಬೇಕು ಎಂದು ಅವರು ಹೇಳಿದರು.
ಮೈಸೂರಿನಲ್ಲಿ ಲಯನ್ಸ್ ಕ್ಲಬ್ ಆಫ್ ಮೈಸೂರು ಪ್ಯಾಲೇಸ್ ಸಿಟಿ ವತಿಯಿಂದ ರಾಷ್ಟ್ರದ ಗಡಿಯನ್ನು ಕಾಯುತ್ತಿರುವ ಹಾಗೂ ನಿವೃತ್ತ ಸೈನಿಕರ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಆಯೋಜಿಸಿದ್ದ ‘ಸೈನಿಕ ಸಮ್ಮಾನ’ ಕಾರ್ಯಕ್ರಮದಲ್ಲಿ ಅಶೋಕ್ ವಿಶೇಷ ಉಪನ್ಯಾಸ ನೀಡಿದರು.
ಸೈನಿಕ ಜೀವನದ ಅನುಭವಗಳನ್ನು ಹಂಚಿಕೊಂಡ ಅವರು, ಸೈನಿಕನ ಜೀವನ ಎಂದರೆ ಕೇವಲ ಸಮವಸ್ತ್ರ ಧರಿಸಿ ಗಡಿಯಲ್ಲಿ ನಿಲ್ಲುವುದಲ್ಲ ದೇಶದ ಸಂವಿಧಾನ, ರಾಷ್ಟ್ರಧ್ವಜ ಮತ್ತು ದೇಶದ ಜನರ ಸುರಕ್ಷತೆಯನ್ನು ಕಾಪಾಡುವ ಮಹತ್ತರ ಜವಾಬ್ದಾರಿ ಸೈನಿಕನ ಮೇಲಿದೆ ಯಾವುದೇ ಪರಿಸ್ಥಿತಿ ಎದುರಾದರೂ ಕರ್ತವ್ಯದಿಂದ ಹಿಂದೆ ಸರಿಯದಿರುವುದು ಸೈನಿಕನ ಗುಣ ಎಂದು ಹೇಳಿದರು.
ಸೈನಿಕರು ದೇಶದ ಗಡಿಯಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಹವಾಮಾನದ ವೈಪರೀತ್ಯ, ಪ್ರತಿಕೂಲ ಪರಿಸ್ಥಿತಿ, ಕುಟುಂಬದಿಂದ ದೂರವಿರುವ ನೋವು ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುತ್ತಾರೆ. ಆದರೂ ದೇಶ ಮೊದಲು, ಕರ್ತವ್ಯ ನಂತರ, ವೈಯಕ್ತಿಕ ಜೀವನ ಕೊನೆಗೆ ಎಂಬ ಮನೋಭಾವದಿಂದ ಸೇವೆ ಸಲ್ಲಿಸುತ್ತಾರೆ. ದೇಶದ ರಕ್ಷಣೆಗೆ ತಮ್ಮ ಜೀವನವನ್ನೇ ಸಮರ್ಪಿಸುವ ಸೈನಿಕರ ಸೇವೆಯನ್ನು ಸಮಾಜ ಸದಾ ಗೌರವಿಸಬೇಕು ಎಂದು ತಿಳಿಸಿದರು.
ಸೈನಿಕರ ಹಿಂದೆ ಅವರ ಕುಟುಂಬದವರ ತ್ಯಾಗವೂ ಮಹತ್ವದ್ದಾಗಿದೆ. ಸೈನಿಕರು ಗಡಿಯಲ್ಲಿ ದೇಶವನ್ನು ಕಾಯುತ್ತಿರುವಾಗ ಅವರ ಕುಟುಂಬದವರು ಹಲವು ಜವಾಬ್ದಾರಿಗಳನ್ನು ನಿಭಾಯಿಸುತ್ತಾರೆ. ಹಾಗಾಗಿ ಸೈನಿಕರಷ್ಟೇ ಅವರ ಕುಟುಂಬದವರ ತ್ಯಾಗವನ್ನೂ ಸಮಾಜ ಗುರುತಿಸಿ ಗೌರವಿಸಬೇಕು ಎಂದು ಲೆ. ಕರ್ನಲ್ ಅಶೋಕ್ ಯು.ಎಸ್ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರಾದ ಲೆ. ಕರ್ನಲ್ ಸಿ.ವಿ. ರಾಜೇಂದ್ರ ಹಾಗೂ ಕಮಾಂಡರ್ ಮಹೇಂದ್ರ ಸಿಂಗ್ ಎಸ್. (ನಿವೃತ್ತ) ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ನಿವೃತ್ತ ಸೈನಿಕರು ತಮ್ಮ ಸೇವಾ ಅವಧಿಯ ಅನುಭವಗಳನ್ನು ಹಂಚಿಕೊಂಡು, ಸೈನಿಕ ಜೀವನವು ಶಿಸ್ತು, ಧೈರ್ಯ, ಸಹನೆ ಮತ್ತು ದೇಶಪ್ರೇಮವನ್ನು ಕಲಿಸುವ ಅತ್ಯುತ್ತಮ ಪಾಠಶಾಲೆಯಾಗಿದೆ ಎಂದು ತಿಳಿಸಿದರು.
ನಾವು ಸೈನಿಕರಾಗಿ ಸೇವೆ ಸಲ್ಲಿಸಿದ ಅವಧಿ ಮುಗಿದರೂ ದೇಶದ ಮೇಲಿನ ನಮ್ಮ ಜವಾಬ್ದಾರಿ ಎಂದಿಗೂ ಮುಗಿಯುವುದಿಲ್ಲ. ಸಮಾಜದ ಒಳಿತಿಗಾಗಿ ಕೆಲಸ ಮಾಡುವುದು, ಯುವಕರಿಗೆ ದೇಶಭಕ್ತಿಯ ಸಂದೇಶ ನೀಡುವುದು ಹಾಗೂ ರಾಷ್ಟ್ರದ ಏಕತೆ ಮತ್ತು ಅಖಂಡತೆಯನ್ನು ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಅವರು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಲಯನ್ ಮಹದೇವಮೂರ್ತಿ ಅವರು ಮಾತನಾಡಿ, ಸೈನಿಕರ ಸೇವೆಯನ್ನು ಸ್ಮರಿಸುವುದು ಕೇವಲ ಸನ್ಮಾನಕ್ಕೆ ಸೀಮಿತವಾಗಬಾರದು; ಅವರ ತ್ಯಾಗ ಮತ್ತು ದೇಶಪ್ರೇಮವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವೂ ನಡೆಯಬೇಕು ಎಂದು ಹೇಳಿದರು.
ನಾವು ಇಂದು ಸುರಕ್ಷಿತ ವಾತಾವರಣದಲ್ಲಿ ಬದುಕುತ್ತಿರುವುದರ ಹಿಂದೆ ಸೈನಿಕರ ನಿಸ್ವಾರ್ಥ ಸೇವೆ ಕಾರಣ. ದೇಶದ ಗಡಿಯಲ್ಲಿ ಸೈನಿಕರು ಎಚ್ಚರಿಕೆಯಿಂದ ನಿಂತಿರುವುದರಿಂದ ನಾವು ನಮ್ಮ ಕುಟುಂಬದೊಂದಿಗೆ ಸಂತೋಷದಿಂದ ಬದುಕುತ್ತಿದ್ದೇವೆ. ಆದ್ದರಿಂದ ಸೈನಿಕರನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಹೆಮ್ಮೆಯ ಕರ್ತವ್ಯ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಲಯನ್ ಎನ್. ಕೃಷ್ಣೇಗೌಡ PMJF, ಲಯನ್ ಜಿ.ಎಂ. ರಮೇಶ್ PMJF, ಲಯನ್ ಎಂ.ಎನ್. ಜೈಪ್ರಕಾಶ್ MJF, ಲಯನ್ ಕೆ.ಎಲ್. ರಾಜಶೇಖರ್ MJF ಹಾಗೂ ಲಯನ್ ಎಂ. ಸಿದ್ದೇಗೌಡ PMJF ,ಲಯನ್ ಜಯಕುಮಾರ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಸೈನಿಕರ ಸೇವೆ ಮತ್ತು ತ್ಯಾಗವನ್ನು ಸ್ಮರಿಸುವುದರ ಜೊತೆಗೆ ನಿವೃತ್ತ ಸೈನಿಕರನ್ನು ಗೌರವಿಸುವ ಮೂಲಕ ದೇಶಭಕ್ತಿ, ರಾಷ್ಟ್ರಪ್ರೇಮ ಮತ್ತು ಸಾಮಾಜಿಕ ಹೊಣೆಗಾರಿಕೆಯ ಸಂದೇಶವನ್ನು ಸಾರಿದ ‘ಸೈನಿಕ ಸಮ್ಮಾನ’ ಕಾರ್ಯಕ್ರಮವು ಭಾವಪೂರ್ಣವಾಗಿ ಹಾಗೂ ಅರ್ಥಪೂರ್ಣವಾಗಿ ನೆರವೇರಿತು ಎಂದು ಲಯನ್ ಜಿಲ್ಲೆ 317ಜಿ ಸಾರ್ವಜನಿಕ ಸಂಪರ್ಕ ಅಧಿಕಾರಿ
ಲಯನ್ ಸಿ ಆರ್ ದಿನೇಶ್
ಮಾಹಿತಿ ನೀಡಿದ್ದಾರೆ.
