ಮೈಸೂರು: ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿ ಆ.25 ರಿಂದ ಸೆ.8ರವರೆಗೆ ಹಮ್ಮಿಕೊಳ್ಳಲಾಗಿರುವ 41ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕಕ್ಕೆ
ನಗರದ ಜಯನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಾಲನೆ ದೊರೆಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ ಹಾಗೂ ಕೆ.ಆರ್.ಆಸ್ಪತ್ರೆ ನೇತ್ರ ಭಂಡಾರ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಂದ ಜಾಗೃತಿ ಜಾಥಾ ನಡೆಸಲಾಯಿತು. ಜಯನಗರದ ಪ್ರಮುಖ ಬೀದಿಗಳಲ್ಲಿ ನೇತ್ರದಾನ ಮಹಾದಾನ ಎಂಬ ಘೋಷಣೆಯೊಂದಿಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಜಾಥಾಕ್ಕೆ ಮುಖ್ಯ ಶಿಕ್ಷಕ ನಾಗರಾಜು ಎಂ.ಎನ್ ಚಾಲನೆ ನೀಡಿದರು.
ಗ್ರಾಮೀಣ ಕುಟುಂಬ ಕಲ್ಯಾಣ ವೈದ್ಯಾಧಿಕಾರಿ ಗಿರೀಶ್ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅನುಷ್ಠಾನಾಧಿಕಾರಿ ಡಾ. ನಾಗೇಶ್ ಮಾತನಾಡಿ, ಯಾವುದೇ ವಯಸ್ಸಿನವರು, ರಕ್ತದೊತ್ತಡ, ಮಧುಮೇಹ, ಕನ್ನಡಕ ಬಳಸುವವರೂ ಕಣ್ಣು ದಾನ ಮಾಡಬಹುದು. ಅಪಘಾತ, ವಿಷ ಸೇವನೆ, ಹೆಪಟೈಟಿಸ್ ಪ್ರಕರಣಗಳನ್ನು ಹೊರತುಪಡಿಸಿ ಎಲ್ಲರೂ ದಾನ ಮಾಡಬಹುದು ಎಂದು ತಿಳಿಹೇಳಿದರು.
ಅಂಗಾಂಗ ಕಸಿ ಸಂಯೋಜಕಿ ಪ್ರಿಯಾ ವಿಜಯ್ ಮೆದುಳು ನಿಷ್ಕ್ರಿಯ ವ್ಯಕ್ತಿಯಿಂದ 8 ಜನರ ಜೀವ ಉಳಿಸಬಹುದು ಎಂದು ಅಂಗಾಂಗ ದಾನದ ಮಹತ್ವ ತಿಳಿಸಿದರು.
ನೇತ್ರದಾನ ಮಾಡಲು 0821-2427253, 9738741819 ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.
