ಮೈಸೂರು: ನಗರದ ಶ್ರೀರಾಂಪುರದ ಮೂಕಾಂಬಿಕಾ ಸಮೃದ್ಧಿ ಬಡಾವಣೆಯಲ್ಲಿರುವ ಸರಸ್ವತಿ ಭಾರತೀಯ ಸಂಸ್ಕಾರ ಕೇಂದ್ರದಲ್ಲಿ ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ವತಿಯಿಂದ ಋಗ್ವೇದ ಉಪಾಕರ್ಮವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಶೃಂಗೇರಿ ಗುರುಪರಂಪರೆಯ ಪ್ರಾರ್ಥನೆಯೊಂದಿಗೆ ಆರಂಭವಾದ ಧಾರ್ಮಿಕ ಕಾರ್ಯಕ್ರಮದಲ್ಲಿ ಪುಣ್ಯಾಹವಾಚನ, ಗಣಪತಿ ಪೂಜೆ, ಋಷಿ ಪೂಜೆ ಹಾಗೂ ಋಷಿ ತರ್ಪಣಗಳನ್ನು ನೆರವೇರಿಸಲಾಯಿತು.
ಬಳಿಕ ನೂತನ ಯಜ್ಞೋಪವೀತಗಳಿಗೆ ಮಂತ್ರಪೂರ್ವಕವಾಗಿ ಪೂಜೆ ಸಲ್ಲಿಸಿ, ವಿಧಿವಿಧಾನದಂತೆ ಯಜ್ಞೋಪವೀತ ಧಾರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ಅಧ್ಯಕ್ಷ ಕೆ.ಆರ್. ಗಣೇಶ್, ಪ್ರತಿ ವರ್ಷ ನಮ್ಮ ಕೇಂದ್ರದಲ್ಲಿ ಋಗ್ವೇದ ಉಪಾಕರ್ಮವನ್ನು ಆಚರಿಸಲಾಗುತ್ತಿದೆ. ಸನಾತನ ಭಾರತದ ಪರಂಪರೆಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿ ನಮಗೆ ಸನ್ಮಾರ್ಗ ತೋರಿಸಿದ ಸಪ್ತಋಷಿಗಳನ್ನು ಪೂಜಿಸಿ, ನೂತನ ಯಜ್ಞೋಪವೀತವನ್ನು ಧರಿಸುವುದು ನಮ್ಮ ಧಾರ್ಮಿಕ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಸರಸ್ವತಿ ಭಾರತೀಯ ಸಂಸ್ಕಾರ ಕೇಂದ್ರದ ಅಧ್ಯಕ್ಷ ಹಾಗೂ ವಿಶ್ವ ಹಿಂದೂ ಪರಿಷತ್ತಿನ ಧರ್ಮ ಪ್ರಸಾರ ವಿಭಾಗದ ಅಧ್ಯಕ್ಷ ಪುನೀತ್ ಜಿ. ಕೂಡ್ಲೂರು ಮಾತನಾಡಿ, “ಮನುಷ್ಯನ ವ್ಯಕ್ತಿತ್ವ ವಿಕಸನದಲ್ಲಿ ಸಂಸ್ಕಾರಗಳು ಪ್ರಮುಖ ಪಾತ್ರ ವಹಿಸುತ್ತವೆ. ಉಪಾಕರ್ಮದಂತಹ ಸಂಸ್ಕಾರಗಳು ನಮ್ಮ ಧಾರ್ಮಿಕ ಕರ್ತವ್ಯಗಳನ್ನು ಪಾಲಿಸುವಂತೆ ಪ್ರೇರೇಪಿಸುತ್ತವೆ ಎಂದು ಹೇಳಿದರು
ವೇದಗಳು ನಮ್ಮ ಸಂಸ್ಕೃತಿಯ ಬೇರುಗಳಾಗಿದ್ದು, ಋಗ್ವೇದ ಮತ್ತು ಯಜುರ್ವೇದಗಳಿಗೆ ಶ್ರಾವಣ ಮಾಸದಲ್ಲಿ ಹಾಗೂ ಸಾಮವೇದಕ್ಕೆ ಭಾದ್ರಪದ ಮಾಸದಲ್ಲಿ ಉಪಾಕರ್ಮ ಆಚರಿಸಲಾಗುತ್ತದೆ. ವೇದಾಧ್ಯಯನವನ್ನು ಪುನರಾರಂಭಿಸುವ ಈ ಧಾರ್ಮಿಕ ಕ್ರಿಯೆಯೇ ಉಪಾಕರ್ಮವಾಗಿದ್ದು, ಇದರೊಂದಿಗೆ ಉತ್ಸರ್ಜನಕ್ಕೂ ಮಹತ್ವವಿದೆ ಎಂದು ವಿವರಿಸಿದರು.
ವೇದಬ್ರಹ್ಮ ಕಾರ್ತಿಕ್ ಅವರು ಉಪಾಕರ್ಮದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ನಿರಂಜನ್ ಕಶ್ಯಪ್, ಡಾ .ಪೃಥು ಪಿ ಅದ್ವೈತ್, ಉದಯಾದಿತ್ಯ, ಕಾರ್ತಿಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
