ಹುಣಸೂರು: ಹುಣಸೂರು ನಗರಸಭೆ ಕಚೇರಿಯಲ್ಲಿ ಮಧ್ಯಾಹ್ನ 12 ಗಂಟೆಯಾದರೂ ಅಧಿಕಾರಿಗಳು ಲಭ್ಯವಿಲ್ಲದೆ ಸರ್ಕಾರಿ ಆದೇಶವನ್ನು ಉಲ್ಲಂಘನೆ ಮಾಡಿದ್ದು, ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಹುಣಸೂರು ನಗರಸಭಾ ವ್ಯಾಪ್ತಿಯ ಕಲ್ಕುಣಿಕೆಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣ ಮಾಡಿದ್ದಾರೆ.ಆದರೆ ಪ್ರತಿಮೆ ಅನಾವರಣದ ವಿಷಯದಲ್ಲಿ ಗೊಂದಲವೆರ್ಪಟ್ಟಿದೆ.
ಈ ವಿಷಯವಾಗಿ ಸಮಸ್ಯೆ ಶೀಘ್ರ ಪರಿಹಾರಕ್ಕಾಗಿ ನಾವು ನಮ್ಮ ಸಂಘಟನೆ ವತಿಯಿಂದ ಮೌನ ಪ್ರತಿಭಟನೆ ಹಮ್ಮಿಕೊಂಡಿದ್ದು,ನಗರಸಭೆ ಕಚೇರಿಗೆ ಮನವಿ ನೀಡಲು ಬೆಳಿಗ್ಗೆ 11.30 ಕ್ಕೆ ಬರಲು ತಿಳಿಸಿದ್ದರು.ಅದರಂತೆ ನಾವು ಹೋದೆವು,ಆದರೆ ಅರ್ಧ ಗಂಟೆ ಕಳೆದರೂ ನಗರಸಭೆಯಲ್ಲಿ ಯಾವ ಸಿಬ್ಬಂದಿ ಯಾಗಲೀ ಅಧಿಕಾರಿಗಳಾಗಲಿ ಇರಲಿಲ್ಲ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಆರೋಪಿಸಿದ್ದಾರೆ.
ಕೇವಲ ಮೂವರು ಅಧಿಕಾರಿಗಳು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದರು. ಸರ್ಕಾರದ ಆದೇಶದಂತೆ ಸರ್ಕಾರಿ ಅಧಿಕಾರಿಗಳು ಸರಿಯಾಗಿ ಬೆಳಿಗ್ಗೆ 10 ಗಂಟೆಗೆ ಕಚೇರಿಯಲ್ಲಿ ಹಾಜರಿರಬೇಕು. ಆದರೆ ಮಧ್ಯಾಹ್ನ 12 ಗಂಟೆ ಯಾದರೂ ಯಾರೂ ಕಚೇರಿಯಲ್ಲಿ ಲಭ್ಯವಿರಲಿಲ್ಲ. ಇದು ನಮ್ಮ ನಗರಸಭೆಯ ಕಾರ್ಯವೈಖರಿ ಎಂದು ಬೇಸರ ವ್ಯಕ್ತಪಡಿಸಿದರು.
ಒಂದು ವೇಳೆ ಆಯುಕ್ತರು ಕಚೇರಿಯಿಂದ ಫೀಲ್ಡ್ ಗೆ ಹೋಗಿದ್ದರೆ ಅವರು ಫೀಲ್ಡ್ ಗೆ ಹೋಗಿರುವ ಬಗ್ಗೆ, ದಾಖಲಾತಿ ಹಾಗೂ ಬೆಳಿಗೆ ಹಾಜರಾಗಿರುವ ಹಾಜರಾತಿ ಮಾಹಿತಿಯನ್ನು ಸಹ ನೀಡಬೇಕು ಆದರೆ ಈ ಕಚೇರಿಯಲ್ಲಿ ಅದೂ ಲಭ್ಯವಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನಲ್ಲಿ ಗೊಂದಲಕ್ಕೆ ಕಾರಣವಾಗಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣ ಕಾರ್ಯವನ್ನು ಯಾವ ಆದೇಶದ ಮೇರೆಗೆ ನಿರ್ಮಿಸಲು ಅನುಮತಿ ನೀಡಲಾಗಿದೆ ಎಂಬ ಬಗ್ಗೆ, ನಮಗೆ ಮಾಹಿತಿ ಅಗತ್ಯವಿದೆ. ಯಾವ ಸಂಘಟನೆಗೆ ಅನುಮತಿ ನೀಡಿದ್ದೀರಿ ಎಂಬ ಬಗ್ಗೆ, ಚರ್ಚಿಸಲು ಅನುಮತಿ ಕೋರಿದ್ದು ಅದರಂತೆ ಕಚೇರಿಗೆ ಬಂದರೆ ಆಯುಕ್ತರು ಲಭ್ಯವಿಲ್ಲ. ಹಾಗಾದರೆ ನಾವು ಯಾರ ಬಳಿ ಈ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು ಎಂದು ಚೆಲುವರಾಜು ಪ್ರಶ್ನಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಗಳು ಆಗಮಿಸುವವರೆಗೂ ನಾವು ಆಹೋರಾತ್ರಿ ಮೌನ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದು ಈ ಪ್ರತಿಭಟನೆ ನಡೆಸಲು ಆಯುಕ್ತರು ಅನುಮತಿ ನೀಡಬೇಕೆಂದು ಕೋರಿದ್ದಾರೆ.
ಹುಣಸೂರಿನ ಶಾಂತಿ ಭಂಗವಾಗಲು ಒಂದು ರೀತಿ ನಗರಸಭೆ ಅಧಿಕಾರಿಗಳೇ ಕಾರಣರಾಗುತ್ತಾರೆ ಎಂದು ಚೆಲುವರಾಜು ಹೇಳಿದ್ದಾರೆ.
