ಮೈಸೂರು: ಲಯನ್ಸ್ ಇಂಟರ್ನ್ಯಾಷನಲ್ ವತಿಯಿಂದ ಶಿಕ್ಷಕರಿಗಾಗಿ ಆಯೋಜಿಸಲಾಗಿದ್ದ ಎರಡು ದಿನಗಳ ‘Skill for Adolescence’ ತರಬೇತಿ ಕಾರ್ಯಾಗಾರಕ್ಕೆ ಮೈಸೂರಿನಲ್ಲಿ ಚಾಲನೆ ನೀಡಲಾಯಿತು.
ಕಾರ್ಯಾಗಾರವನ್ನು ಲಯನ್ಸ್ ಇಂಟರ್ನ್ಯಾಷನಲ್ನ ಪಾಸ್ಟ್ ಮಲ್ಟಿಪಲ್ ಕೌನ್ಸಿಲ್ ಚೇರ್ಮನ್ ಲಯನ್ ಡಾ. ಎನ್. ಕೃಷ್ಣೇಗೌಡ, ಎರಡನೇ ಉಪರಾಜ್ಯಪಾಲರಾದ ಲಯನ್ ಎಂ. ಸಿದ್ದೇಗೌಡ, ಕ್ವೆಸ್ಟ್ ಜಿಲ್ಲಾಧ್ಯಕ್ಷರಾದ ಲಯನ್ ಕೋಮಲ ವಿ.ಸಿ. ಹಾಗೂ ಕಾರ್ಯಾಗಾರದ ತರಬೇತುದಾರರು ಮತ್ತು ಹಿರಿಯ ಪಾಸ್ಟ್ ಡಿಸ್ಟ್ರಿಕ್ಟ್ ಗವರ್ನರ್ ಲಯನ್ ಕವಿತಾ ಶಾಸ್ತ್ರಿ ಅವರು ಉದ್ಘಾಟಿಸಿದರು.
ಕೌಮಾರ್ಯ ಹಂತದಲ್ಲಿರುವ ಮಕ್ಕಳಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣ, ಉತ್ತಮ ಸಂವಹನ ಕೌಶಲ್ಯ, ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹಾಗೂ ಜೀವನ ಕೌಶಲ್ಯಗಳನ್ನು ಬೆಳೆಸುವಲ್ಲಿ Skill for Adolescence ಕಾರ್ಯಕ್ರಮ ಮಹತ್ವದ ಪಾತ್ರ ವಹಿಸುತ್ತದೆ. ಶಿಕ್ಷಕರು ಈ ತರಬೇತಿಯ ಮೂಲಕ ವಿದ್ಯಾರ್ಥಿಗಳ ಮನೋಭಾವ, ನಡವಳಿಕೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಪರಿಣಾಮಕಾರಿಯಾಗಿ ಮಾರ್ಗದರ್ಶನ ನೀಡುವ ಉದ್ದೇಶವನ್ನು ಹೊಂದಲಾಗಿದೆ.
ಕಾರ್ಯಾಗಾರದಲ್ಲಿ ತರಬೇತಿದಾರರಾದ ಲಯನ್ ಆಶಾ ಕೃಪಾ, ಪ್ರಾಂತೀಯ ಅಧ್ಯಕ್ಷರಾದ ಲಯನ್ ಜಯಕುಮಾರ್, ಲಯನ್ ಮೃತ್ಯುಂಜಯ, ವಲಯ ಅಧ್ಯಕ್ಷರು, ಕ್ವೆಸ್ಟ್ ಕೋಆರ್ಡಿನೇಟರ್ ಲಯನ್ ಶಿವಾಜಿರಾವ್, ಕ್ವೆಸ್ಟ್ ಡಿಸ್ಟ್ರಿಕ್ಟ್ ಕೋಆರ್ಡಿನೇಟರ್ (DC) ಲಯನ್ ಮನೋಹರ್, DLSF ಟ್ರಸ್ಟಿ ಲಯನ್ ಮನುಗೌಡ ಸೇರಿದಂತೆ ವಿವಿಧ ಲಯನ್ಸ್ ಕ್ಲಬ್ಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.
ಎರಡು ದಿನಗಳ ಕಾಲ ನಡೆದ ಕಾರ್ಯಾಗಾರದಲ್ಲಿ ಶಿಕ್ಷಕರಿಗೆ ಕೌಮಾರ್ಯ ವಯಸ್ಸಿನ ಮಕ್ಕಳೊಂದಿಗೆ ಪರಿಣಾಮಕಾರಿ ಸಂವಹನ, ಜೀವನ ಕೌಶಲ್ಯಗಳ ಬೆಳೆಸುವಿಕೆ, ನಾಯಕತ್ವ, ಆತ್ಮವಿಶ್ವಾಸ, ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ಹಾಗೂ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಾಯೋಗಿಕ ತರಬೇತಿ ನೀಡಲಾಯಿತು.
ಕಾರ್ಯಾಗಾರದ ಪ್ರಯೋಜಕತ್ವವನ್ನು ವಹಿಸಿಕೊಂಡ ವಿವಿಧ ಲಯನ್ಸ್ ಕ್ಲಬ್ಗಳ ಸದಸ್ಯರ ಸಹಕಾರವನ್ನು ಕಾರ್ಯಕ್ರಮದ ಆಯೋಜಕರು ಶ್ಲಾಘಿಸಿದರು.
ಇಂದಿನ ವಿದ್ಯಾರ್ಥಿಗಳು ನಾಳಿನ ಸಮಾಜದ ನಾಯಕರು. ಅವರಲ್ಲಿ ಉತ್ತಮ ಜೀವನ ಕೌಶಲ್ಯಗಳನ್ನು ಬೆಳೆಸುವ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. SFA ತರಬೇತಿಯು ಶಿಕ್ಷಕರಿಗೆ ಈ ನಿಟ್ಟಿನಲ್ಲಿ ಪರಿಣಾಮಕಾರಿ ಸಾಧನವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು ಎಂದು ಲಯನ್ಸ್ ಜಿಲ್ಲೆ 317ಜಿಯ ಜಿಲ್ಲಾ ಸಂಪರ್ಕ ಅಧಿಕಾರಿ ಲಯನ್ ಸಿ.ಆರ್. ದಿನೇಶ್ ತಿಳಿಸಿದ್ದಾರೆ.
