ಬೆಂಗಳೂರು: ಆಮ್ ಆದ್ಮಿ ಪಕ್ಷದ ಕುಮಾರ ಕೃಪ ರಸ್ತೆಯಲ್ಲಿರುವ ಪ್ರಧಾನ ಕಚೇರಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಗರ್ಭಿತವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಕಾರ್ಯಾಧ್ಯಕ್ಷರಾದ ಸೀತಾರಾಮ್ ಗುಂಡಪ್ಪ ಅವರು ಮಾತನಾಡಿ, ದೇಶಕ್ಕೆ ರಾಜಕೀಯ ಸ್ವಾತಂತ್ರ್ಯ ದೊರೆತು ಎಂಟು ದಶಕಗಳು ಕಳೆದಿವೆ. ಆದರೆ ಪ್ರತಿಯೊಬ್ಬ ಭಾರತೀಯನಿಗೂ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಸಮಾನವಾಗಿ, ಉಚಿತವಾಗಿ ಹಾಗೂ ಗೌರವಯುತವಾಗಿ ದೊರೆಯುವವರೆಗೆ ಸ್ವಾತಂತ್ರ್ಯದ ಪರಿಪೂರ್ಣ ಫಲ ಜನಸಾಮಾನ್ಯರಿಗೆ ತಲುಪಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಸರ್ಕಾರಿ ಶಿಕ್ಷಣ ವ್ಯವಸ್ಥೆ ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳ ಮೇಲೆ ಪ್ರಭಾವಿ ಖಾಸಗಿ ಹಿಡಿತ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಬಡವರು ಮತ್ತು ಮಧ್ಯಮ ವರ್ಗದ ಜನರು ಶಿಕ್ಷಣ ಹಾಗೂ ಆರೋಗ್ಯಕ್ಕಾಗಿ ತಮ್ಮ ಆದಾಯದ ಬಹುಪಾಲನ್ನು ಖರ್ಚು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಎರಡು ಮೂಲಭೂತ ಕ್ಷೇತ್ರಗಳಿಗೆ ಖಾಸಗಿ ಹಿತಾಸಕ್ತಿಗಳ ಒತ್ತಡದಿಂದ ಸಂಪೂರ್ಣ ಮುಕ್ತಿ ದೊರೆತು, ಬಲಿಷ್ಠ ಸಾರ್ವಜನಿಕ ವ್ಯವಸ್ಥೆ ನಿರ್ಮಾಣವಾದಾಗಲೇ ದೇಶಕ್ಕೆ ದೊರೆತ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಸಿಗಲಿದೆ, ಎಂದು ಸೀತಾರಾಮ್ ಗುಂಡಪ್ಪ ಹೇಳಿದರು.
ಆಮ್ ಆದ್ಮಿ ಪಕ್ಷದ ಧ್ಯೇಯ, ಸಿದ್ಧಾಂತ ಮತ್ತು ರಾಜಕೀಯ ಗುರಿಗಳು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶ ಕಲ್ಪಿಸುವುದಕ್ಕೆ ಬದ್ಧವಾಗಿವೆ. ಜನರ ತೆರಿಗೆಯ ಹಣ ಜನರ ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಹಕ್ಕುಗಳಿಗಾಗಿ ಪರಿಣಾಮಕಾರಿಯಾಗಿ ಬಳಕೆಯಾಗಬೇಕು ಎಂಬುದು ಪಕ್ಷದ ನಿಲುವಾಗಿದೆ ಎಂದು ತಿಳಿಸಿದರು.
ಅಧಿಕಾರ ಕೆಲವೇ ರಾಜಕೀಯ ಮತ್ತು ಆರ್ಥಿಕ ಶಕ್ತಿಗಳ ಕೈಯಲ್ಲಿ ಕೇಂದ್ರೀಕೃತವಾಗದೆ, ಜನಸಾಮಾನ್ಯರ ಕೈಗೆ ಅಧಿಕಾರ ತಲುಪಬೇಕು. ಜನರೇ ರಾಜಕೀಯದ ಕೇಂದ್ರಬಿಂದುವಾಗಬೇಕು. ಜನರ ರಾಜಕೀಯ ಶಕ್ತಿಯಿಂದಲೇ ದೇಶವನ್ನು ಪ್ರಾಮಾಣಿಕತೆ, ಸಮಾನತೆ ಮತ್ತು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸುವ ತುರ್ತು ಅಗತ್ಯವಿದೆ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಚಿತ್ ಸೆಹವಾನಿ, ಕಾರ್ಯದರ್ಶಿಗಳಾದ ಉಷಾ ಮೋಹನ್, ಜಗದೀಶ್ ಚಂದ್ರ ಸೇರಿದಂತೆ ಪಕ್ಷದ ಹಲವು ನಾಯಕರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
