ಮೈಸೂರು: ಮೈಸೂರಿನಸಿದ್ಧಾರ್ಥನಗರದ ಕಾವೇರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ
ನೇಗಿಲಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗದಿಂದ ಚಾಮುಂಡೇಶ್ವರಿ ಪೂಜೆ, ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ವೈದ್ಯರ ದಿನಾಚರಣೆ ಹಮ್ಮಿಕೊಳ್ಳಲಾಯಿತು.
ಮೊದಲಿಗೆ ಕಾರ್ಯಕ್ರಮದ ಅಂಗವಾಗಿ ಆಸ್ಪತ್ರೆಯಲ್ಲಿ ಚಾಮುಂಡೇಶ್ವರಿ ದೇವಿಯ ಪ್ರತಿಷ್ಠಾಪನೆ ಮಾಡಿ ಪೂಜೆ ನೆರವೇರಿಸಲಾಯಿತು.
ಖ್ಯಾತ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರಾದ ಡಾ. ಸರಳ ಚಂದ್ರಶೇಖರ್ ಮತ್ತು ಡಾ. ಚಂದ್ರಶೇಖರ್ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಡಾ. ಸರಳ ಚಂದ್ರಶೇಖರ್ ಅವರು ಮಹಿಳೆಯರ ಆರೋಗ್ಯದ ಬಗ್ಗೆ ಸಮಗ್ರ ತಪಾಸಣೆ ನಡೆಸಿದರು. ಮಹಿಳೆಯರು ತಮ್ಮ ದೈಹಿಕ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೆ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಶಿಬಿರದಲ್ಲಿ ಸುಮಾರು 100 ಮಹಿಳೆಯರಿಗೆ ಉಚಿತವಾಗಿ ವಿವಿಧ ತಪಾಸಣೆಗಳನ್ನು ನಡೆಸಿ, ಅಗತ್ಯ ವೈದ್ಯಕೀಯ ಸಲಹೆ ಮತ್ತು ಕೌನ್ಸೆಲಿಂಗ್ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೇಗಿಲಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗದ ಅಧ್ಯಕ್ಷೆ ಶೋಭಾ ರಮೇಶ್ ವಹಿಸಿದ್ದರು. ಮಹಿಳೆಯರ ಆರೋಗ್ಯ ಮತ್ತು ಜಾಗೃತಿಯ ಅಗತ್ಯದ ಬಗ್ಗೆ ಡಾ. ಸರಳ ಚಂದ್ರಶೇಖರ್ ವಿಶೇಷ ಉಪನ್ಯಾಸ ನೀಡಿದರು.
ವೈದ್ಯರ ದಿನಾಚರಣೆಯ ಅಂಗವಾಗಿ ಕಾವೇರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಡಾ. ಸರಳ ಚಂದ್ರಶೇಖರ್, ಡಾ. ವೈದ್ಯನಾಥನ್ ಆರ್., ಡಾ. ಆದರ್ಶ್ ಎಸ್.ಪಿ., ಡಾ. ಮಂಜುನಾಥ್ ಭಾರ್ಗವ್ ಹೆಚ್.ಎಸ್., ಡಾ. ಅರವಿಂದ್ ಆರ್.ಎಂ. ಮತ್ತಿತರ ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ನೇಗಿಲಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗದ ಅಧ್ಯಕ್ಷೆ ಶೋಭಾ ರಮೇಶ್ ಅವರು ಕಾವೇರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಸರಳ ಚಂದ್ರಶೇಖರ್, ಡಾ. ಚಂದ್ರಶೇಖರ್ ಹಾಗೂ ಶಿಬಿರಕ್ಕೆ ಸಹಕರಿಸಿದ ಎಲ್ಲಾ ವೈದ್ಯರು ಮತ್ತು ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಡಿ. ರವಿಕುಮಾರ್ ಸೇವಾ ಬಳಗದ ಪದಾಧಿಕಾರಿಗಳಾದ ಯೋಗಾವತಿ, ವೀಣಾ ಸುರೇಶ್, ಬಿ. ವಿಜಯಲಕ್ಷ್ಮಿ, ಲಾವಣ್ಯ ರಾಜ್, ಶೋಭಾ ಧನಂಜಯ್, ಸೀತಮ್ಮ ಬಿ.ಕೆ., ಸಿ.ಆರ್. ಅನಿತಾ, ವೇದಾಮಣಿ, ಚಂದ್ರಕಲಾ ರಮೇಶ್ ಹಾಗೂ ರಾಣಿ ಮಹೇಶ್ ಉಪಸ್ಥಿತರಿದ್ದರು.
