ಮೈಸೂರು: ನೈರುತ್ಯ ರೈಲ್ವೆಯ ಮಹಾಪ್ರಬಂಧಕರಾದ ಪಿ. ಅನಂತ್ ಅವರು ಸಿಬ್ಬಂದಿಯೊಂದಿಗೆ ಮೈಸೂರು ರೈಲ್ವೆ ವಿಭಾಗದ ವಿವಿಧ ಘಟಕಗಳು ಹಾಗೂ ಮೂಲ ಸೌಕರ್ಯಗಳ ಸಮಗ್ರ ಪರಿಶೀಲನೆ ನಡೆಸಿದರು.
ಮೊದಲು ಅವರು ಮೈಸೂರು ರೈಲ್ವೆ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿನ ಆರೋಗ್ಯ ಸೇವೆಗಳ ಗುಣಮಟ್ಟ, ರೋಗಿಗಳ ಆರೈಕೆ, ವೈದ್ಯಕೀಯ ಉಪಕರಣಗಳು ಹಾಗೂ ಮೂಲಸೌಕರ್ಯಗಳ ಲಭ್ಯತೆಯನ್ನು ಪರಿಶೀಲಿಸಿದರು.
ವೈದ್ಯರು, ಸಿಬ್ಬಂದಿ ಹಾಗೂ ರೋಗಿಗಳೊಂದಿಗೆ ಸಂವಾದ ನಡೆಸಿದ ಮಹಾಪ್ರಬಂಧಕರು, ರೈಲ್ವೆ ನೌಕರರು ಮತ್ತು ಅವರ ಕುಟುಂಬಗಳಿಗೆ ಉತ್ತಮ, ಸಮಯೋಚಿತ ಹಾಗೂ ರೋಗಿ-ಕೇಂದ್ರಿತ ವೈದ್ಯಕೀಯ ಸೇವೆಗಳನ್ನು ಒದಗಿಸುವ ಅಗತ್ಯವನ್ನು ಒತ್ತಿಹೇಳಿದರು.
ನಂತರ ಮೈಸೂರು-ಚಾಮರಾಜನಗರ ವಿಭಾಗದಲ್ಲಿ ವಿಂಡೋ ಟ್ರೈಲಿಂಗ್ ಪರಿಶೀಲನೆ ನಡೆಸಿದರು. ನಂಜನಗೂಡು ನಿಲ್ದಾಣದಲ್ಲಿ ಸ್ಟೇಷನ್ ಮಾಸ್ಟರ್ ಪ್ಯಾನೆಲ್, ನಿಲ್ದಾಣ ಆವರಣ ಹಾಗೂ ರೈಲು ಹಳಿಗಳ ಪಾಯಿಂಟ್ಗಳನ್ನು ವೀಕ್ಷಿಸಿದರು.
ಚಾಮರಾಜನಗರ ನಿಲ್ದಾಣದಲ್ಲಿ ಅಮೃತ ಭಾರತ್ ಸ್ಟೇಷನ್ ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು. ಸ್ಟೇಷನ್ ಮಾಸ್ಟರ್ ಪ್ಯಾನೆಲ್ ಬೋರ್ಡ್ ಹಾಗೂ ನಂಜನಗೂಡು-ಚಾಮರಾಜನಗರ ವಿಭಾಗದ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 35 ರ ಕಾರ್ಯವೈಖರಿಯನ್ನು ಪರಿಶೀಲಿಸಿದರು.
ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಗುಣಮಟ್ಟ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಮೈಸೂರು ವಿಭಾಗೀಯ ಕಚೇರಿಯಲ್ಲಿ ವಿಮರ್ಶಾ ಸಭೆ ನಡೆಸಿದ ಅವರು, ವಿಭಾಗದ ಕಾರ್ಯಕ್ಷಮತೆ ಹಾಗೂ ಪ್ರಮುಖ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದರು. ಕಾರ್ಯಾಚರಣೆಯನ್ನು ಬಲಪಡಿಸುವುದು, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಪ್ರಯಾಣಿಕರ ಸೇವೆಗಳನ್ನು ಸುಧಾರಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಿದರು.
ಈ ಸಂದರ್ಭದಲ್ಲಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಮುದಿತ್ ಮಿತ್ತಲ್, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶಮ್ಮಾಸ್ ಹಮೀದ್, ಸಿಪಿಎಂ/ಗತಿಶಕ್ತಿ ಆನಂದ ಭಾರತಿ, ಮುಖ್ಯ ವೈದ್ಯಕೀಯ ಅಧೀಕ್ಷಕರಾದ ಡಾ. ಅಶೋಕ್ ಕುಮಾರ್ ಹಾಗೂ ಮೈಸೂರು ವಿಭಾಗದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
