ಮೈಸೂರು: ಶಾಸಕ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ಕೈತಪ್ಪಲು ಮಾಜಿ ಸಿಎಂ ಸಿದ್ದರಾಮಯ್ಯ ಕಾರಣ ಎಂಬ ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅವರ ಹೇಳಿಕೆಗೆ ನಗರಾಭಿವೃದ್ದಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಮೈಸೂರಿನ ಗಾಂಧಿನಗರದ ಉರಿಲಿಂಗಿಪೆದ್ದಿ ಮಠಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಾಕ್ಷಿಯಿಲ್ಲ, ಆಧಾರವಿಲ್ಲ. ಸುಮ್ಮನೆ ಹೇಳುತ್ತಿದ್ದಾರೆ. ತಂದೆಯವರು ಯಾರಿಗೂ ರೆಕ್ಮೆಂಡ್ ಮಾಡಿಲ್ಲ. ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದರಲ್ಲಿ ನಮ್ಮ ತಂದೆಯ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಸ್ಲಿಂ ಕೋಟಾದಲ್ಲಿ ಇಬ್ಬರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಅದನ್ನು ಹೈಕಮಾಂಡ್ ಭರ್ತಿ ಮಾಡಿದೆ. ಸಿದ್ದರಾಮಯ್ಯ ಅವರು ಎಷ್ಟು ಮಂದಿಗೆ ರೆಕ್ಮೆಂಡ್ ಮಾಡಿದ್ದಾರೆ ಗೊತ್ತಿಲ್ಲ. ಕೆಲವರ ಹೆಸರನ್ನು ತಂದೆಯವರು ಹೇಳಿದ್ದರು. ಆದರೆ ಅವರ ಲಿಸ್ಟ್ ನಾನು ನೋಡಿರಲಿಲ್ಲ. ತಂದೆಯವರು ಮಹದೇವಪ್ಪ ಪರ ಕೇಳಿದ್ದು ಸತ್ಯ ಎಂದು ತಿಳಿಸಿದರು.
ಸಚಿವ ಸಂಪುಟದ ಬಗ್ಗೆ ಅಸಮಾಧಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ, ಅಸಮಾಧಾನ ಗೊಂಡವರನ್ನು ಸಮಾಧಾನ ಮಾಡುವ ಕೆಲಸ ಮುಗಿದಿದೆ. ತನ್ವೀರ್ ಸೇಠ್ ಮತ್ತು ಮಹದೇವಪ್ಪ ಇಬ್ಬರೂ ಅನುಭವಿ ರಾಜಕಾರಣಿಗಳು. ಅವರನ್ನು ಸಮಾಧಾನಪಡಿಸುವಷ್ಟು ನಾನು ದೊಡ್ಡವನಲ್ಲ ಎಂದು ಹೇಳಿದರು.
ರಾಜ್ಯವು ಹಿಂದೂ ರಾಷ್ಟ್ರವಾಗಬಾರದು. ಜಾತಿ ವ್ಯವಸ್ಥೆ ಪುನಃ ಬರಬಾರದು ಎಂಬುದು ನನ್ನ ಆಶಯ. ಶೋಷಣೆ ಆದರೆ ನಾವು ಶೋಷಿತರಾಗುತ್ತೇವೆ. ಇಷ್ಟು ವರ್ಷಗಳ ಕಾಲ ದೇಶ ಸೆಕ್ಯುಲರ್ ಆಗಿದೆ. ಈಗಲೂ ಭಾರತ ಧರ್ಮಾಧಾರಿತ ರಾಷ್ಟ್ರ ಆಗಿಲ್ಲ ಎಂದು ಯತೀಂದ್ರ ತಿಳಿಸಿದರು.
ಮೊದಲು ತಾತ್ಕಾಲಿಕವಾಗಿ ಜಿಲ್ಲಾ ಉಸ್ತುವಾರಿ ನೀಡಲಾಗಿತ್ತು. ಈಗ ಬಹುತೇಕ ನಾನೇ ಮೈಸೂರು ಉಸ್ತುವಾರಿ ಎಂದು ಫಿಕ್ಸ್ ಮಾಡಿದ್ದಾರೆ ಎಂದು ಸಚಿವರು ಹೇಳಿದರು.
ಕಂಬಳ ವಿಚಾರದಲ್ಲಿ ಅಂತಿಮ ತೀರ್ಮಾನವಾಗಿಲ್ಲ. ಸಿಎಂ ನಡೆಯಬೇಕು ಎಂದರೆ ನಡೆಯುತ್ತದೆ ಎಂದರು.
ಪ್ರಮಾಣವಚನಕ್ಕೆ ಸಿದ್ದರಾಮಯ್ಯ ಗೈರಾಗಿದ್ದು ಅವರ ಹುಟ್ಟುಹಬ್ಬದ ಕಾರಣ. ಅವರಿಗೆ ಯಾವುದೇ ಅಸಮಾಧಾನ ಇಲ್ಲ ಎಂದು ಸ್ಪಷ್ಟಪಡಿಸಿದರು.
