ಟಿ.ನರಸೀಪುರ: ಈ ಬಾರಿ ಸರಿಯಾಗಿ ಮಳೆ ಇಲ್ಲದೇ ಬೆಳೆ ಬೆಳೆಯಲಾಗದೆ ರೈತರು ಸಂಕಷ್ಟದಲ್ಲಿದ್ದು,ಕೂಡಲೇ ಮುಖ್ಯಮಂತ್ರಿಗಳು ತುರ್ತು ಬರ ಪರಿಹಾರ ಘೋಷಣೆ ಮಾಡಿ,ಪ್ರತಿ ರೈತರಿಗೆ ಎಕರೆಗೆ 50 ಸಾವಿರ ರೂ ನೀಡಲು ಕ್ರಮ ಕೈಗೊಳ್ಳಬೇಕು
ಎಂದು ಭಾರತೀಯ ಕಿಸಾನ್ ಸಂಘ ಆಗ್ರಹಿಸಿದೆ.
ಭಾರತೀಯ ಕಿಸಾನ್ ಸಂಘ ತಿ.ನರಸೀಪುರ ತಾಲ್ಲೋಕು ಘಟಕದ ಮಾಸಿಕ ಸಭೆ ನಂತರ ಸಾಂಕೇತಿಕ ಅಂಚೆ ಚಳವಳಿ ನಡೆಸಿ, ತಾಲೋಕು ಅಧ್ಯಕ್ಷ ಶಿವಕುಮಾರ್ ನಾಗಲಾಗೆರೆ ಅವರು ಈ ಬಗ್ಗೆ ಮಾತನಾಡಿದರು.
ರೈತರು ಈಗಾಗಲೇ ಬಿತ್ತನೆ ಬೀಜ, ರಸ ಗೊಬ್ಬರಕ್ಕಾಗಿ ವಿವಿಧ ಬ್ಯಾಂಕ್ ಗಳಲ್ಲಿ ಸಾಲ ಮಾಡಿದ್ದಾರೆ, ಈ ಸಾಲ ಕಟ್ಟಲಾಗದೆ ಕಂಗಾಲಾಗಿದ್ದಾರೆ.ಆದ್ದರಿಂದ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಗಂಡತೋರು ಮಾತನಾಡಿ, ರೈತರು ಪ್ರತಿ ಹಳ್ಳಿಗಳಲ್ಲಿ ಹೈನುಗಾರಿಕೆಯಲ್ಲಿ ತೊಡಗಿದ್ದು ಪ್ರತಿ ಲೆಟರ್ ಗೆ 36+4=40 ರೂಪಾಯಿ ನೀಡಲಾಗುತ್ತಿದೆ. ಹುಲ್ಲು, ನೀರು, ಹಿಂಡಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕೇರಿದ್ದು ಹೈನೋದ್ಯಮ ರೈತರಿಗೆ ನೀಡುತ್ತಿರುವ ಹಣ ಸಾಕಾಗುವುದಿಲ್ಲ ಎಂದು ತಿಳಿಸಿದರು.
ಕೇರಳ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಸರ್ಕಾರ ಹಾಲಿಗೆ ಪ್ರೋತ್ಸಾಹ ಧನ ಸೇರಿ 60 ರೂ ನಿಗದಿ ಪಡಿಸಿವೆ ಕರ್ನಾಟಕ ಸರ್ಕಾರ ಮತ್ತು ಕೆ.ಎಂ.ಎಫ್. ಒಕ್ಕೂಟಗಳು ನಮ್ಮ ರೈತರಿಗೆ ಪ್ರತಿ ಲೀಟರ್ ಹಾಲಿಗೆ 50 ರೂಪಾಯಿಗಳನ್ನು ತಕ್ಷಣ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ಮುಂಗಾರು ವೈಫಲ್ಯದಿಂದ ಬರದ ಸಂಕಷ್ಟದಲ್ಲಿರುವ ರೈತರಿಗೆ ಆರ್ಥಿಕ ಸಂಕಷ್ಟದಿಂದ ಪಾರಾಗಲು ಜಿಲ್ಲಾಧ್ಯಂತ ಭಾರತೀಯ ಕಿಸಾನ್ ಸಂಘ ವಿವಿಧ ತಾಲೂಕುಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ರೈತರ ಮೂಲಕ ಬೃಹತ್ ಅಂಚೆ ಚಳುವಳಿ ಹಮ್ಮಿಕೊಂಡಿದೆ. ಆಗಸ್ಟ್ 29 ರಂದು ಮೈಸೂರಿನ ಮುಖ್ಯ ಹಾಲು ಮಹಾಮಂಡಳಿಯ ಹತ್ತಿರ ಬೃಹತ್ ಚಳವಳಿ ಹಮ್ಮಿಕೊಂಡಿದೆ ರೈತರೆಲ್ಲ ಸಹಕರಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಉಪಾಧ್ಯಕ್ಷರುಗಳಾದ ಪರಮೇಶ್ ಬೆನಕನಹಳ್ಳಿ, ಪ್ರಭು ಮಾಲಂಗಿ, ಜಯಶೀಲ ಬನ್ನಳ್ಳಿಹುಂಡಿ, ನಾಗರಾಜು ಮಾರಾಡೀಪುರ, ಮಹಿಳಾ ಪ್ರಮುಖರಾದ ಮಹದೇವಮ್ಮ, ಕಾರ್ಯದರ್ಶಿ ಪ್ರಭಾಕರ, ಮುಕುಂದ, ಜಗದೀಶ್ ಮಾಡವಾಡಿ, ಮಹೇಶ್, ಮಾದೇಗೌಡ, ಬೋರೆಗೌಡ, ಶಂಕರ, ಮೋಹನ, ಕುಮಾರ, ಲಿಂಗರಾಜು, ನಿಂಗರಾಜು, ರಾಜಶೇಖರ ಮುದುಕನಪುರ, ನಾಗೇಶ್, ಮಹಂತೇಶಪ್ಪ, ಪ್ರಕಾಶ್, ಬಸವರಾಜು, ಮಹದೇವಸ್ವಾಮಿ, ಶಶಿಕುಮಾರ, ಡ್ಯಾನ್ಸ್ ಬಸವರಾಜು, ದರ್ಶನ್, ಗುರುಮಲ್ಲಪ್ಪ,
ಬನ್ನಳ್ಳಿಹುಂಡಿ ಮನು ಸೇರಿದದಂತೆ ವಿವಿಧ ಗ್ರಾಮಗಳ ರೈತರು ಹಾಜರಿದ್ದರು.
