ಚೆನ್ನೈ: ನಟಿ ತ್ರಿಷಾ ಅವರನ್ನು ಉಲ್ಲೇಖಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ತಮಿಳುನಾಡು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಬಂಧಿಸಲಾಗಿದೆ.
ಕಾವೇರಿ ಜಲ ವಿವಾದದ ಕುರಿತು ಭಾಷಣ ಮಾಡುವ ವೇಳೆ ಸ್ಟಾಲಿನ್ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸ ಒದಗಿಸಿತ್ತು.
ಕಾವೇರಿ ನೀರಿನ ವಿಚಾರದಲ್ಲಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಸರ್ಕಾರವನ್ನು ಟೀಕಿಸುತ್ತಿದ್ದ ವೇಳೆ ಉದಯನಿಧಿ ಸ್ಟಾಲಿನ್ ನೀಡಿದ ಹೇಳಿಕೆಯನ್ನು ಹಲವರು ನಟಿ ತ್ರಿಷಾ ಅವರನ್ನು ಉಲ್ಲೇಖಿಸಿ ಮಾಡಿದ ದ್ವಂದ್ವಾರ್ಥದ್ದು ಎಂದು ಆರೋಪಿಸಿದ್ದರು.
ಈ ಕುರಿತು ಟಿವಿಕೆ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಕ್ರಮಕ್ಕೆ ಒತ್ತಾಯಿಸಿದ್ದವು.
ಪ್ರಕರಣ ದಾಖಲಿಸಿದ ಕೆಲವೇ ಹೊತ್ತಿನಲ್ಲಿ ಪೊಲೀಸರು ಉದಯನಿಧಿ ಸ್ಟಾಲಿನ್ ಅವರನ್ನು ಮಂಗಳವಾರ ಬಂಧಿಸಿದ್ದಾರೆ.
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಉದಯನಿಧಿ, ನಾನು ಯಾವುದೇ ತಪ್ಪು ಮಾಡಿಲ್ಲ, ನಾನು ಮುಖ್ಯಮಂತ್ರಿಯನ್ನು ಬಿಟ್ಟರೆ ಬೇರೆ ಯಾರ ಹೆಸರನ್ನೂ ಹೇಳಿಲ್ಲ, ಇದು ರಾಜಕೀಯ ಪ್ರತೀಕಾರದ ಕ್ರಮ. ಈ ವಿಚಾರದ ಅಂತಿಮ ತೀರ್ಪನ್ನು ನ್ಯಾಯಾಲಯವೇ ನೀಡಲಿದೆ ಎಂದು ತಿಳಿಸಿದರು.
ತಂಜಾವೂರಿನಲ್ಲಿ ಕಾವೇರಿ ನೀರಿನ ಬಿಕ್ಕಟ್ಟಿನ ಕುರಿತು ನಡೆದ ಡಿಎಂಕೆ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಿದ್ದ ಉದಯನಿಧಿ ಸ್ಟಾಲಿನ್, ನಮ್ಮ ಮುಖ್ಯಮಂತ್ರಿ ಕಾವೇರಿ ನೀರಿನ ವಿಷಯದ ಬಗ್ಗೆ ಬಾಯಿ ತೆರೆಯುತ್ತಿಲ್ಲ. ಅವರ ಏಕೈಕ ಚಿಂತೆ ಡಿಎಂಕೆ ವಿರುದ್ಧ ಸುಳ್ಳು ಪ್ರಕರಣಗಳನ್ನು ಹೇಗೆ ಹಾಕುವುದು ಅಷ್ಟೇ ಎಂದು ವ್ಯಂಗ್ಯವಾಡಿದ್ದರು.
ಇದೇ ವೇಳೆ ಜನಸಮೂಹದಿಂದ ತ್ರಿಷಾ, ತ್ರಿಷಾ ಎಂಬ ಘೋಷಣೆಗಳು ಕೇಳಿಬಂದವು. ಅದಕ್ಕೆ ಪ್ರತಿಕ್ರಿಯಿಸಿದ ಉದಯನಿಧಿ, ದ್ವಂದ್ವಾರ್ಥ ಬರುವ ರೀತಿಯಲ್ಲಿ ಯಾವ ನೀರು ಬರುತ್ತದೋ ಇಲ್ಲವೋ, ಆ ನೀರು ಬರಲೇಬೇಕುʼ ಎಂದು ಹೇಳಿದ್ದರು.
ಈ ಮಾತು ನಟಿ ತ್ರಿಷಾ ಅವರನ್ನು ಪರೋಕ್ಷವಾಗಿ ಗುರಿಯಾಗಿಸಿ, ಮಹಿಳೆಯನ್ನು ಅವಮಾನಿಸುವ ಹಾಗೂ ಅಶ್ಲೀಲ ಅರ್ಥ ನೀಡುವ ರೀತಿಯಲ್ಲಿದೆ ಎಂದು ಟಿವಿಕೆ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಆರೋಪಿಸಿ,ಆಕ್ರೋಶ ವ್ಯಕ್ತಪಡಿಸಿದ್ದವು.
