ಮಂಡ್ಯ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಆರ್. ನಂದಿನಿ ಅವರು ಮಳವಳ್ಳಿ ತಾಲೂಕು ಪಂಚಾಯತಿ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಅಕ್ಕ ಕೆಫೆಗೆ ಅನಿರೀಕ್ಷಿತ ಭೇಟಿ ನೀಡಿ ಕಾಮಗಾರಿ ಗುಣಮಟ್ಟ ಪರಿಶೀಲಿಸಿದರು.
ಮೊದಲ ಹಂತದಲ್ಲಿ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಅಕ್ಕ ಕೆಫೆ ಪ್ರಾರಂಭಿಸಲು ಉದ್ದೇಶಿಸಲಾಗಿತ್ತು. ಈಗಾಗಲೇ ಶ್ರೀರಂಗಪಟ್ಟಣ ಮತ್ತು ಪಾಂಡವಪುರ ತಾಲೂಕುಗಳಲ್ಲಿ ಕೆಫೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ.
ಮಳವಳ್ಳಿ ಕೆಫೆ ಕಾಮಗಾರಿಯನ್ನು ಶೀಘ್ರ ಮುಗಿಸಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವಂತೆ ತಾಂತ್ರಿಕ ಅಧಿಕಾರಿ ಹಾಗೂ ಗುತ್ತಿಗೆದಾರರಿಗೆ ಸಿಇಒ ಸೂಚನೆ ನೀಡಿದರು.
ಅಕ್ಕ ಕೆಫೆಯನ್ನು ಮಹಿಳಾ ಸ್ವಸಹಾಯ ಸಂಘಗಳ ಮೂಲಕ ನಿರ್ವಹಿಸಲಾಗುತ್ತಿದೆ. ಗುಣಮಟ್ಟದ ಆಹಾರ ಹಾಗೂ ಸ್ವಚ್ಛತೆಯ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಿಬ್ಬಂದಿಗೆ ತರಬೇತಿ ನೀಡಲು ಸಜ್ಜುಗೊಳಿಸಬೇಕು ಎಂದು ಹೇಳಿದರು.
ಗ್ರಾಹಕರಿಗೆ ಶುದ್ಧ ಗಾಳಿ, ಬೆಳಕಿನೊಂದಿಗೆ ಕುಳಿತು ಊಟ ಮಾಡುವ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ನಂದಿನಿ ನಿರ್ದೇಶನ ನೀಡಿದರು. ಮಹಿಳಾ ಸಂಘಗಳ ಆರ್ಥಿಕ ಸಬಲೀಕರಣಕ್ಕೆ ಅಕ್ಕ ಕೆಫೆ ಮಹತ್ವದ ವೇದಿಕೆಯಾಗಿದೆ ಎಂದು ಸಿಇಒ ಹೇಳಿದರು.
ಈ ಸಂದರ್ಭದಲ್ಲಿ ತಾಪಂ ಇಒ ಶ್ರೀನಿವಾಸ್, ಸಹಾಯಕ ನಿರ್ದೇಶಕ ಪಾರ್ಥಸಾರಥಿ,ಎನ್ ಆರ್ ಎಲ್ ಎಮ್ ಜಿಲ್ಲಾ ವ್ಯವಸ್ಥಾಪಕ ಕಿಶೋರ್, ಎಇಇ ಅಪ್ಪಣ್ಣ, ಅರುಣ್, ಸುನೀಲ್ ಉಪಸ್ಥಿತರಿದ್ದರು.
